ರುಚಿಕರ & ಆರೋಗ್ಯಕರ 'ಬೀಟ್ರೂಟ್ ಪೂರಿ' : ಕಡಿಮೆ ಎಣ್ಣೆಯಲ್ಲೇ ಸುಲಭವಾಗಿ ತಯಾರಿಸಿ - BEETROOT POORI RECIPE
Beetroot Poori Recipe : ಬೀಟ್ರೂಟ್ ಪೂರಿ ರುಚಿಕರ ಹಾಗೂ ಆರೋಗ್ಯಕರ ರೆಸಿಪಿಯಾಗಿದೆ. ಸಾಮಾನ್ಯ ಪೂರಿಯನ್ನು ಮೀರಿದ ರುಚಿ ಈ ಬೀಟ್ರೂಟ್ ಪೂರಿಗಳಲ್ಲಿದೆ. ಇವುಗಳನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು.
Beetroot Poori Recipe: ಬೀಟ್ರೂಟ್ ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಇದು ದೇಹಕ್ಕೆ ಅಗತ್ಯವಿರುವ ಸಾಕಷ್ಟು ಪೋಷಕಾಂಶಗಳು ಹಾಗೂ ಖನಿಜಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಕೆಲವರಿಗೆ ನೇರವಾಗಿ ಬೀಟ್ರೂಟ್ ಸೇವಿಸಲು ಕಷ್ಟವಾಗುತ್ತದೆ. ಜ್ಯೂಸ್ ಕುಡಿಯಲು ಅವರಿಗೆ ಇಷ್ಟವಾಗುವುದಿಲ್ಲ. ಅಂಥವರಿಗಾಗಿಯೇ ಇಲ್ಲಿದೆ ಸಖತ್ ಟೇಸ್ಟಿಯಾದ ಸೂಪರ್ ಬ್ರೇಕ್ ಫಾಸ್ಟ್ ರೆಸಿಪಿ ಬೀಟ್ರೂಟ್ ಪೂರಿ.
ಪ್ರತಿನಿತ್ಯ ಒಂದೇ ಬಗೆಯ ಉಪಹಾರ ಸೇವಿಸಲು ಬೇಜಾರಾದವರಿಗೆ ಈ ರೆಸಿಪಿ ಹೊಸ ಟೇಸ್ಟ್ ಕೊಡುತ್ತದೆ. ಈ ರೀತಿ ಪೂರಿಗಳು ಮನೆ ಮಂದಿಗೆಲ್ಲರಿಗೂ ಇಷ್ಟವಾಗುತ್ತವೆ. ಜೊತೆಗೆ ಈ ಪೂರಿಗಳು ಕಡಿಮೆ ಎಣ್ಣೆಯನ್ನು ಹೀರಿಕೊಳ್ಳುತ್ತವೆ. ಇವುಗಳನ್ನು ತಿನ್ನುವುದರಿಂದ ರುಚಿಯ ಜೊತೆಗೆ ಉತ್ತಮ ಆರೋಗ್ಯದ ಪ್ರಯೋಜನಗಳು ಲಭಿಸುತ್ತವೆ. ಇವುಗಳನ್ನು ತಯಾರಿಸುವುದು ಕೂಡ ತುಂಬಾ ಸುಲಭವಾಗಿದೆ. ಈ ಟೇಸ್ಟಿ ಮತ್ತು ಆರೋಗ್ಯಕರ ಬೀಟ್ರೂಟ್ ಪೂರಿಗೆ ಬೇಕಾಗುವ ಪದಾರ್ಥಗಳೇನು ಹಾಗೂ ತಯಾರಿಸುವ ವಿಧಾನ ಹೇಗೆ ಎಂಬುದನ್ನು ನೋಡೋಣ.
ಬೀಟ್ರೂಟ್ ಪೂರಿ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳೇನು ?
ಗೋಧಿ ಹಿಟ್ಟು - 2 ಕಪ್
ಉಪ್ಪು - ರುಚಿಗೆ ತಕ್ಕಷ್ಟು
ರವೆ - 1 ಟೀಸ್ಪೂನ್
ಬೀಟ್ರೂಟ್ - 1
ಖಾರದ ಪುಡಿ - ಅರ್ಧ ಟೀಸ್ಪೂನ್
ಧನಿಯಾ ಪುಡಿ - ಅರ್ಧ ಟೀಸ್ಪೂನ್
ಎಣ್ಣೆ - ಡೀಪ್ ಫ್ರೈ ಮಾಡಲು ಬೇಕಾಗುಷ್ಟು
ಬೀಟ್ರೂಟ್ ಪೂರಿ ತಯಾರಿಸುವ ವಿಧಾನ :
ಮೊದಲು ಬೀಟ್ರೂಟ್ ತೊಳೆದು ಸಿಪ್ಪೆ ತೆಗೆಯಿರಿ. ಬಳಿಕ ಬೀಟ್ರೂಟ್ ಅನ್ನು ಮಧ್ಯಮ ಗಾತ್ರದ ಪೀಸ್ಗಳನ್ನಾಗಿ ಕಟ್ ಮಾಡಿ.
ನಂತರ ಬೀಟ್ರೂಟ್ ಪೀಸ್ಗಳನ್ನು ಒಲೆಯ ಮೇಲೆ ಪಾತ್ರೆ ಇಟ್ಟು, ಅದರೊಳಗೆ ಹಾಕಿ ಹಾಗೂ ಸಾಕಷ್ಟು ನೀರು ಸೇರಿಸಿ ಬೇಯಿಸಿ.
ಬೇಯಿಸಿದ ಬೀಟ್ರೂಟ್ ಪೀಸ್ಗಳನ್ನು ನಂತರ, ಅವುಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ಹಾಗೂ ಮೃದುವಾದ ಪೇಸ್ಟ್ ರೀತಿ ರುಬ್ಬಿಕೊಂಡು ಪಕ್ಕಕ್ಕೆ ಇಡಿ.
ಈಗ ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದರೊಳಗೆ ಗೋಧಿ ಹಿಟ್ಟು, ರವೆ, ಬೀಟ್ರೂಟ್ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಸ್ವಲ್ಪ ನೀರು, ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಹಾಗೂ ಉಪ್ಪು ಸೇರಿಸಿ, ಪೂರಿ ಪೇಸ್ಟ್ ರೀತಿಯಲ್ಲಿ ಹಿಟ್ಟನ್ನು ರೆಡಿ ಮಾಡಿಕೊಳ್ಳಬೇಕಾಗುತ್ತದೆ. ಬಳಿಕ ಚಿಕ್ಕ ಹಿಟ್ಟಿನ ಉಂಡೆಗಳಾಗಿ ಸಿದ್ಧಪಡಿಸಬೇಕಾಗುತ್ತದೆ.
ಇದೀಗ ಚಪಾತಿ ಮಣೆಯ ಮೇಲೆ ಒಂದು ಹಿಟ್ಟಿನ ಉಂಡೆ ಇಡಿ. ಅದನ್ನು ಪೂರಿಯಂತೆ ರೆಡಿ ಮಾಡಿಕೊಳ್ಳಿ. ಎಲ್ಲವನ್ನೂ ಇದೇ ರೀತಿ ತಯಾರಿಸಿ ಪಕ್ಕಕ್ಕಿಡಬೇಕು.
ಇದೀಗ ಕಡಾಯಿಯನ್ನು ಒಲೆಯ ಮೇಲೆ ಇಟ್ಟು ಕರಿಯಲು ಬೇಕಾದಷ್ಟು ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿಯಾದ ಬಳಿಕ ಪೂರಿಗಳನ್ನು ಒಂದೊಂದಾಗಿ ಹಾಕಿ ಎರಡೂ ಕಡೆ ಚೆನ್ನಾಗಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಿ.
ನಂತರ ಅದನ್ನು ತಟ್ಟೆಯಲ್ಲಿ ತೆಗೆದುಕೊಂಡು ಬಿಸಿಯಾಗಿ ಬಡಿಸಿ. ಈಗ ರುಚಿಕರವಾದ ಬೀಟ್ರೂಟ್ ಪೂರಿ ಸಿದ್ಧವಾಗಿವೆ.
ಈ ಪೂರಿಗಳನ್ನು ತೆಂಗಿನಕಾಯಿ, ಶೇಂಗಾ ಚಟ್ನಿ, ದಾಲ್, ರೈತಾ ಅಥವಾ ಇತರ ಯಾವುದೇ ಚಟ್ನಿ ಜೊತೆಗೆ ಸೇವಿಸಿದರೂ ತುಂಬಾ ರುಚಿಕರವಾಗಿರುತ್ತದೆ. ಒಮ್ಮೆ ಸೇವಿಸಿದರೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ.
ನಿಮಗೆ ಇಷ್ಟವಾದರೆ, ಬೀಟ್ರೂಟ್ ಪೂರಿ ಒಮ್ಮೆ ಟ್ರೈ ಮಾಡಿ ನೋಡಿ.