ಬೆಂಗಳೂರು:ಕರ್ನಾಟಕ ರಾಜ್ಯ ಸರ್ಕಾರ ಕೃತಕ ಬಣ್ಣಗಳ ಬಳಕೆಯನ್ನು ಇತ್ತೀಚಿಗೆ ನಿಷೇಧಿಸಿ ಆದೇಶ ಹೊರಡಿಸಿದೆ. ಈ ಆದೇಶ ಉಲ್ಲಂಘಿಸಿ ಆಹಾರಗಳಿಗೆ ಇವುಗಳನ್ನು ಬಳಕೆ ಮಾಡಿದಲ್ಲಿ 10 ಲಕ್ಷ ರೂ. ಗಳವರೆಗೆ ದಂಡ ಮತ್ತು 7 ವರ್ಷದಿಂದ ಜೀವಾವಧಿ ಶಿಕ್ಷೆ ವಿಧಿಸುವ ಎಚ್ಚರಿಕೆ ನೀಡಿದೆ.
ಈ ಬೆನ್ನಲ್ಲೇ ಮಾತನಾಡಿರುವ ತಜ್ಞರು ಇವುಗಳ ಕಟ್ಟುನಿಟ್ಟಿನ ನಿಷೇಧ ಕುರಿತು ಸಹಮತ ಸೂಚಿಸಿದ್ದು, ಇವುಗಳ ಸೇವನೆಯಿಂದ ಆಗುವ ಅಪಾಯ ಕುರಿತು ತಿಳಿಸಿದ್ದಾರೆ. ಕೃತಕ ಬಣ್ಣಗಳು ಆಹಾರವನ್ನು ನೋಡುವಲ್ಲಿ ಕಣ್ಸೆಳೆಯುವಂತೆ ಮಾಡಿ, ಇದು ಗ್ರಾಹಕರಲ್ಲಿ ತಿನ್ನುವ ಬಯಕೆಯನ್ನು ಹೆಚ್ಚಿಸಲಿವೆ ಎಂದಿದ್ದಾರೆ.
ಸೂರ್ಯಕಾಂತಿ ಹಳದಿ, ಕಾರ್ಮೊಸಿನ್, ರಡೊಮೈನ್ ಬಿ ಸೇರಿದಂತೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದಾಗಿ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ 39 ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಹೀಗೆ ಪರೀಕ್ಷೆಗೊಳಪಡಿಸಿದ ಮಾದರಿಗಳಲ್ಲಿ 8 ಕಬಾಬ್‌ನ ಮಾದರಿಗಳು ಕೃತಕ ಬಣ್ಣದಿಂದ (ಸನ್‌ಸೆಟ್ ಯೆಲ್ಲೋ 7 ಮಾದರಿಗಳು ಹಾಗೂ ಸನ್‌ಸೆಟ್ ಯೆಲ್ಲೋ ಮತ್ತು ಕಾರ್ಮೋಸಿನ್ ಹೊಂದಿರುವ ಮಾದರಿಗಳು 1) ಕೂಡಿರುವುದು ಅಸುರಕ್ಷಿತ ಅನ್ನೋದು ಪರೀಕ್ಷಾ ವರದಿಗಳಲ್ಲಿ ಕಂಡುಬಂದಿತ್ತು. ಹೀಗಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ರ ನಿಯಮ 3(1) (zz) (viii)ರನ್ವಯ ಅಸುರಕ್ಷಿತ ಎಂದು ವರದಿ ಮಾಡಲ್ಪಟ್ಟಿರುತ್ತವೆ. ಕೃತಕ ಬಣ್ಣಗಳು ಅಲರ್ಜಿ, ಮಕ್ಕಳಲ್ಲಿ ಅಧಿಕ ಕ್ರಿಯಾಶೀಲತೆ ಹಾಗೂ ಕಾರ್ಸಿನೋಜೆನಿಕ್ ಪರಿಣಾಮ ಬೀರಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಬಾಬ್ಗೆ ಬಳಕೆ ಮಾಡುತ್ತಿರುವ ಈ ಕೃತಕ ಬಣ್ಣಗಳು ಅಪಾಯಕಾರಿ ಮಟ್ಟದಲ್ಲಿದ್ದು, ಇದು ಸಾರ್ವಜನಿಕರ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಇವುಗಳ ನಿಷೇಧಕ್ಕೆ ಕಟ್ಟು ನಿಟ್ಟಿನ ನಿಯಂತ್ರಣ ಅಗತ್ಯವಾಗಿದೆ ಎಂದು ಬೆಂಗಳೂರಿನ ಅಸ್ಟರ್ ವೈಟ್ಫೀಲ್ಡ್ನ ಇಂಟರ್ನಲ್ ಮೆಡಿಸಿನ್ ಡಾ ಬಸವರಾಜ್ ಎಸ್ ಕುಂಬಾರ್ ತಿಳಿಸಿದ್ದಾರೆ.
ಕೃತಕ ಅಥವಾ ಅಪಾಯಕಾರಿ ಸಿಂಥೆಟಿಕ್ ಬಣ್ಣಗಳಿಗೆ ಬದಲಾಗಿ ಗ್ರಾಹಕರ ಆರೋಗ್ಯ ಮತ್ತು ಆಹಾರ ಅಭ್ಯಾಸದ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ನೈಸರ್ಗಿಕ ಬಣ್ಣಗಳ ಬಳಕೆಗೆ ಮುಂದಾಗಬೇಕಿದ್ದು, ಇದಕ್ಕೆ ಉತ್ತೇಜಿಸಬೇಕಿದೆ ಎಂದಿದ್ದಾರೆ.