ಈಗಿನ ಜನರು ಕೆಲಸದ ಒತ್ತಡದಲ್ಲಿ ತಮ್ಮ ಆರೋಗ್ಯದ ಕಡೆ ಗಮನ ಹರಿಸುವುದನ್ನೇ ಮರೆತು ಬಿಟ್ಟಿದೆ. ಸುಂದರ ಜೀವನಕ್ಕಾಗಿ ದುಡಿಯಲು ಆರಂಭಿಸಿ ಕೊನೆಗೆ ತಮ್ಮ ಸಂತೋಷವನ್ನೇ ಕೆಲಸಕ್ಕಾಗಿ ತ್ಯಾಗ ಮಾಡಿಬಿಡುತ್ತಾರೆ. ಕಚೇರಿಯಲ್ಲಿ ಕೆಲಸ ಮಾಡುವುದಲ್ಲದೇ, ಮತ್ತೆ ಮನೆಗೆ ಬಂದು ರಾತ್ರಿಯಿಡೀ ನಿದ್ದೆ ಬಿಟ್ಟು ವರ್ಕ್ ಮಾಡುವುದು. ಹೊತ್ತಲ್ಲದ ಹೊತ್ತಿನಲ್ಲಿ ನಿದ್ದೆ ಮಾಡುವುದು. ಇನ್ನೂ ಕೆಲವರು ಬಿಡುವಿದ್ದರೂ ರಾತ್ರಿ 10 ಗಂಟೆ ನಂತರ ಮೊಬೈಲ್ನಲ್ಲಿ ಸಿನಿಮಾ ನೋಡುತ್ತಾ ನಿದ್ರಾ ದೇವಿಯನ್ನು ದೂರ ಮಾಡುತ್ತಾರೆ. ಮತ್ತೆ ಕೆಲವರಿಗೆ ಬೇಗ ಮಲಗಿದರೂ ನಿದ್ದೆಯೇ ಬರದಿರುವುದು. ಕಾರಣಗಳು ಏನೇ ಇರಲಿ.. ಆದರೆ ಮಧ್ಯರಾತ್ರಿ ನಿದ್ದೆಗೆ ಜಾರುವುದರಿಂದ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋದು ನಿಮ್ಮ ಗಮನದಲ್ಲಿರಲಿ.
ಲೇಟ್ ನೈಟ್ ಸ್ಲೀಪ್ನ ಪರಿಣಾಮಗಳನ್ನು ನೋಡಿ: ಆರೋಗ್ಯಕರವಾಗಿರಲು ಆಹಾರ ಎಷ್ಟು ಮುಖ್ಯವೋ ನಿದ್ದೆ ಅಷ್ಟೇ ಮುಖ್ಯ. ಮನುಷ್ಯರಿಗೆ ಕನಿಷ್ಠ 7 ರಿಂದ 8 ಗಂಟೆಗಳ ನಿದ್ರೆಯಾದರೂ ಬೇಕು. ನೀವು ಉತ್ತಮವಾಗಿ ನಿದ್ರೆ ಮಾಡಿ ಎದ್ದರೇ ಆ ಇಡೀ ದಿನ ಆಹ್ಲಾದಕರವಾಗಿ ಇರುತ್ತದೆ. ಬೇಕಾದರೆ ನೀವೇ ಒಂದು ಬಾರಿ ಗಮನಿಸಿ ನೋಡಿ. ನಿದ್ದೆ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಬೇಗ ಪರಿಣಾಮ ಬೀರುತ್ತದೆ. ತಡವಾಗಿ ನಿದ್ದೆ ಮಾಡಿದರೆ ಏನಾಗುತ್ತದೆ ಎಂಬುದನ್ನು ವಿವರವಾಗಿ ಹೈದರಾಬಾದ್ನ ಹಿರಿಯ ಸಲಹೆಗಾರ ವೈದ್ಯ ಡಾ. ದಿಲೀಪ್ ಗುಡೆ ತಿಳಿಸಿದ್ದಾರೆ.
ಸಿರ್ಕಾಡಿಯನ್ ರಿದಮ್/ಲಯ ತಪ್ಪುತ್ತದೆ : ಇದೊಂದು ನಮ್ಮ ದೇಹದಲ್ಲಿರುವ ನೈಸರ್ಗಿಕ ಪ್ರಕ್ರಿಯೆ. ಇಡೀ ದಿನದಲ್ಲಿ ನಮ್ಮ ದೇಹದಲ್ಲಾಗುವ ಬದಲಾವಣೆಗಳನ್ನು ಇದು ನಿಯಂತ್ರಿಸುತ್ತದೆ. ಇನ್ನೊಂದು ರೀತಿಯಲ್ಲಿ ಇದನ್ನು ನಮ್ಮ ದೇಹದ ಗಡಿಯಾರ ಎನ್ನಬಹುದು. ಪ್ರತಿನಿತ್ಯ ಮಧ್ಯರಾತ್ರಿಯ ನಂತರ ಮಲಗುವವರ ದೇಹದಲ್ಲಿ ಸಿರ್ಕಾಡಿಯನ್ ರಿದಮ್ ತಪ್ಪುತ್ತದೆ ಎಂದು ಡಾ.ದಿಲೀಪ್ ಗುಡೆ ಹೇಳುತ್ತಾರೆ. ಹಾರ್ಮೋನ್ ಬಿಡುಗಡೆ, ಚಯಾಪಚಯ ಮತ್ತು ದೇಹದ ಉಷ್ಣತೆಯ ನಿಯಂತ್ರಣದಂತಹ ಪ್ರಮುಖ ದೇಹದ ಕಾರ್ಯಗಳ ಮೇಲೆ ಇದು ಪರಿಣಾಮ ಬೀರುತ್ತದೆ.
ಮೆದುಳಿಗೆ ಎಫೆಕ್ಟ್: ರಾತ್ರಿ 12 ಗಂಟೆ ಕಳೆದ ನಂತರ ನಿದ್ದೆ ಮಾಡುವವರಲ್ಲಿ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇದರಿಂದ ಏಕಾಗ್ರತೆ, ಜ್ಞಾಪಕ ಶಕ್ತಿ ನಷ್ಟ ಮತ್ತು ಮನಸ್ಸಿನಲ್ಲಿ ಅಸುರಕ್ಷತೆಯ ಭಾವನೆ ಬರುತ್ತದೆ.
ಹಾರ್ಮೋನ್ ಬದಲಾವಣೆಗಳು: ಮಧ್ಯರಾತ್ರಿಯ ನಂತರ ಮಲಗುವ ಜನರಲ್ಲಿ ಕಾರ್ಟಿಸೋಲ್‌ನಂತಹ ಒತ್ತಡದ ಹಾರ್ಮೋನ್‌ಗಳ ಮಟ್ಟ ಹೆಚ್ಚುತ್ತದೆ. ಇದು ಕೂಡ ಮಾನಸಿಕ ಆತಂಕಕ್ಕೆ ಕಾರಣವಾಗುತ್ತೆ. ಅಲ್ಲದೇ ಕೆಲವರಿಗೆ ತೂಕ ಹೆಚ್ಚಾಗುವುದೂ ಉಂಟು. ಈ ಸಮಸ್ಯೆ ಯುವಕರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆಯಂತೆ.