ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ತಮ್ಮ ಅತ್ಯಂತ ಮಹತ್ವದ ಪ್ರೊಜೆಕ್ಟ್ಗೆ ಸಜ್ಜಾಗುತ್ತಿದ್ದಾರೆ. ಹಿಂದೂ ಮಹಾಕಾವ್ಯ 'ರಾಮಾಯಣ' ಆಧಾರಿತ ಅದ್ಧೂರಿ ಸಿನಿಮಾ ಮೂಡಿಬರಲಿದೆ. ಪೌರಾಣಿಕ ಕಥೆಗೆ ಜೀವ ತುಂಬಲು ಭಾರತೀಯ ಚಿತ್ರರಂಗದ ಬಹುಬೇಡಿಕೆ ತಾರೆಯರನ್ನು ನಿರ್ದೇಶಕರು ಒಟ್ಟುಗೂಡಿಸಿದ್ದಾರೆ. 'ರಾಮಾಯಣ' ಸುತ್ತಲಿರುವ ಸುದ್ದಿಗಳು ಸದ್ಯಕ್ಕೆ ಒಂದು ಊಹೆ, ಅಂದಾಜು. ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದ್ದು, ಶೀಘ್ರವೇ ಅಫಿಶಿಯಲ್ ಅನೌನ್ಸ್ಮೆಂಟ್ ಆಗುವ ಸಾಧ್ಯತೆಗಳಿವೆ.
ಪೌರಾಣಿಕ ಕಥೆಯಾಧಾರಿತ ಸಿನಿಮಾ ಸುತ್ತ ಸಾಕಷ್ಟು ನಿರೀಕ್ಷೆಗಳಿವೆ. ಬಾಲಿವುಡ್ ಸೂಪರ್ ಸ್ಟಾರ್ ರಣ್ಬೀರ್ ಕಪೂರ್ ಭಗವಾನ್ ಶ್ರೀರಾಮನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟಿ ಸಾಯಿ ಪಲ್ಲವಿ ಸೀತಾ ದೇವಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ರಾವಣನ ಪಾತ್ರದಲ್ಲಿ ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಳ್ಳಲಿದ್ದಾರೆ. ಕೈಕೇಯಿ ಪಾತ್ರದ ಮೂಲಕ ಲಾರಾ ದತ್ತಾ ಚಿತ್ರತಂಡ ಸೇರುವ ಸಾಧ್ಯತೆಯಿದೆ. ಆದ್ರೆ ಚಿತ್ರತಂಡ ಮೌನ ಮುಂದುವರಿಸಿದ್ದು, ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.
ಸದ್ಯ ಚಿತ್ರದ ಸುತ್ತಲಿರುವ ಮಾಹಿತಿ ಪ್ರಕಾರ, ''ರಾಮಾಯಣ''ದ ಪ್ರಮುಖ ಪಾತ್ರಧಾರಿಗಳು ಮುಂದಿನ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭಿಸಲು ಸಜ್ಜಾಗಿರುವ ಹಿನ್ನೆಲೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಸೀಮಿತಗೊಳಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ರಾಮಾಯಣ ತಂಡ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದೆ. ಕಲಾವಿದರ ನೋಟಕ್ಕೆ ಸಂಬಂಧಿಸಿದಂತೆ ಕೆಲಸಗಳು ನಡೆಯುತ್ತಿವೆ ಎಂದು ಚಿತ್ರತಂಡದ ಆಪ್ತಮೂಲಗಳು ತಿಳಿಸಿವೆ. ಏಪ್ರಿಲ್ ಮಧ್ಯದಲ್ಲಿ ಚಿತ್ರೀಕರಣ ಪ್ರಾರಂಭಿಸಲು ಎದುರು ನೋಡುತ್ತಿದ್ದಾರೆ. ಹೆಚ್ಚಿನ ಚಿತ್ರೀಕರಣವು ಮುಂಬೈ ಫಿಲ್ಮ್ ಸಿಟಿನಲ್ಲಿ ನಿರ್ಮಿಸಲಾಗಿರುವ ಬೃಹತ್ ಸೆಟ್‌ಗಳಲ್ಲೇ ನಡೆಯಲಿದೆ.