ಬಾಲಿವುಡ್ನ ಜನಪ್ರಿಯ ತಾರಾ ದಂಪತಿ ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ಗೆ ಸಂಬಂಧಿಸಿದಂತೆ ಪಾಪರಾಜಿಗಳ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಆಲಿಯಾ ಅವರ ತಾಯಿ ಸೋನಿ ರಜ್ದಾನ್ ಅವರ ಜನ್ಮದಿನವನ್ನು ಆಚರಿಸುವ ಸಲುವಾಗಿ ಅಕ್ಟೋಬರ್ 25ರಂದು ಹೊರಬಂದಿದ್ದರು. ಆದ್ರೆ ಪಾಪರಾಜಿಗಳ ವರ್ತನೆಗೆ ರಾಲಿಯಾ ದಂಪತಿ ಕೋಪಗೊಂಡಿದ್ದಾರೆ.
ಆಲಿಯಾ ಭಟ್ ಬೊಟೊಕ್ಸ್ನಿಂದ ಭಾಗಶಃ ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ ಎಂಬ ವದಂತಿಗಳೊಂದಿಗೆ ಪ್ರಾರಂಭವಾದ ಅವರ ದಿನ ರಣ್ಬೀರ್ ಕಪೂರ್ ತಮ್ಮ ಶಾಂತತೆಯನ್ನು ಕಳೆದುಕೊಳ್ಳುವುದರೊಂದಿಗೆ ಕೊನೆಗೊಂಡಿತು. ರೆಸ್ಟೋರೆಂಟ್ನಿಂದ ಹೊರಬರುವಾಗ ಪಾಪರಾಜಿಗಳ ಗುಂಪು ಮುಗಿಬಿದ್ದಿದ್ದು, ರಣ್ಬೀರ್ ಕಪೂರ್ ರೊಚ್ಚಿಗೆದ್ದಿದ್ದಾರೆ. ಆಲಿಯಾ ಪ್ರತಿಕ್ರಿಯಿಸದೇ, ಸಿಟ್ಟನ್ನು ಸಹಿಸಿಕೊಂಡು ಮುನ್ನಡೆದಿದ್ದಾರೆ.
ಇಂಟರ್ನೆಟ್ನಲ್ಲಿ ಶರವೇಗದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ರಣ್ಬೀರ್ - ಆಲಿಯಾ ಮುಂಬೈನ ಪಾಪ್ಯುಲರ್ ರೆಸ್ಟೋರೆಂಟ್ನಿಂದ ಹೊರಡುತ್ತಿರುವುದನ್ನು ಕಾಣಬಹುದು. ಅಲ್ಲಿ ಪಾಪರಾಜಿಗಳು ಫೋಟೋ ವಿಡಿಯೋ ಸೆರೆಹಿಡಿಯುವ ಭರದಲ್ಲಿ ಜೋಡಿಯ ಮಾರ್ಗವನ್ನು ಅಡ್ಡಗಟ್ಟಿದ್ದಾರೆ. ಶಾಂತ ವರ್ತನೆಗೆ ಹೆಸರುವಾಸಿಯಾಗಿರುವ ಸೂಪರ್ ಸ್ಟಾರ್ ರಣ್ಬೀರ್ ಕಪೂರ್ ಅವರು ಗೊಂದಲದ ವಾತಾವರಣದಲ್ಲಿ ತಮ್ಮ ಶಾಂತತೆಯನ್ನು ಕಳೆದುಕೊಂಡರು. 'ಕ್ಯಾ ಕರ್ ರಹೇ ಹೋ ಆಪ್ ಲೋಗ್?' (ನೀವೇನು ಮಾಡುತ್ತಿದ್ದೀರಾ?) ಎಂದು ಸಿಟ್ಟಿನಿಂದ ಕೇಳುತ್ತಾ ತಮ್ಮ ಅಸಮಧಾನ ಹೊರಹಾಕಿದರು. ಕಾರ್ ಡೋರ್ ಬಳಿಯಿದ್ದ ಫೋಟೋಗ್ರಾಫರ್ನನ್ನು ತಮ್ಮ ಕೈಯಿಂದ ಎಳೆದು, ಸೈಡಿಗಟ್ಟಿ ಕಾರಿನೊಳಗೆ ಆಲಿಯಾರನ್ನು ಕಳುಹಿಸಿದರು. ನಂತರ ತಾವು ಕೂಡಾ ಒಳಹೋಗಿ ಕುಳಿತರು.
ಇದಕ್ಕೂ ಮುನ್ನ ರಣ್ಬೀರ್ ಅವರು ಸಂಜಯ್ ಲೀಲಾ ಬನ್ಸಾಲಿ ಅವರ ಆಫೀಸ್ ಬಳಿ ಕಾಣಿಸಿಕೊಂಡಿದ್ದು, ಮುಂದಿನ ಸಿನಿಮಾ ಬಗ್ಗೆ ಅಭಿಮಾನಿ ಬಳಗ ಸೇರಿದಂತೆ ಚಿತ್ರರಂಗದ ಗಣ್ಯರಲ್ಲಿ ಉತ್ಸಾಹ ಹುಟ್ಟುಹಾಕಿದೆ. ಸ್ಟೈಲಿಶ್ ಬೀಜ್ ಟೀ-ಶರ್ಟ್, ಜೀನ್ಸ್ ಮತ್ತು ಟ್ರೆಂಡಿ ಆ್ಯಕ್ಸಸರಿಸ್ನಲ್ಲಿ ಕಾಣಿಸಿಕೊಂಡ ಅವರು ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ 'ಲವ್ ಅಂಡ್ ವಾರ್'ಗೆ ಸಂಬಂಧಿಸಿದ ಮೀಟಿಂಗ್ಗೆ ಹೋಗುವಾಗ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಈ ಚಿತ್ರದಲ್ಲಿ ಪತ್ನಿ ಆಲಿಯಾ ಭಟ್ ಹಾಗೂ ಬಹುಬೆಡಿಕೆ ಟನ ನಟ ವಿಕ್ಕಿ ಕೌಶಲ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಪ್ರೊಜೆಕ್ಟ್ ಮೂಲಕ ರಣ್ಬೀರ್ ಮತ್ತು ಬನ್ಸಾಲಿ ಮತ್ತೊಮ್ಮೆ ಸೇರಿ ಕೆಲಸ ಮಾಡಲಿದ್ದಾರೆ. 2007ರ ಸಾವರಿಯಾ ಚಿತ್ರದ ನಂತರ ಬರುತ್ತಿರುವ ಬನ್ಸಾಲಿ ಕಪೂರ್ ಕಾಂಬಿನೇಶನ್ನ ಸಿನಿಮಾವಾದ ಹಿನ್ನೆಲೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿದೆ.