ಬಾಲಿವುಡ್ ಕಲಾವಿದರಾದ ವಿಕ್ಕಿ ಕೌಶಲ್, ಅಕ್ಷಯ್ ಖನ್ನಾ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯದ 'ಛಾವಾ' ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಲಕ್ಷ್ಮಣ್ ಉಟೇಕರ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವು ಮೂರೇ ದಿನಗಳಲ್ಲಿ 100 ಕೋಟಿ ರೂಪಾಯಿಯ ಕ್ಲಬ್ ಪ್ರವೇಶಿಸಿದ 2025ರ ಮೊದಲ ಹಿಂದಿ ಚಿತ್ರವಾಗಿ ಹೊರಹೊಮ್ಮಿದೆ. ಹಿಸ್ಟಾರಿಕಲ್ ಡ್ರಾಮಾ ತನ್ನ ಮೊದಲ ದಿನದಂದು ನಿರೀಕ್ಷೆಗಳನ್ನು ಮೀರಿ ಕಲೆಕ್ಷನ್ ಮಾಡಿದೆ. 2ನೇ ದಿನ ಸರಿ ಸುಮಾರು ಶೇ.20ರಷ್ಟು ಏರಿಕೆ ಕಂಡಿದೆ. ಮೊದಲ ಭಾನುವಾರ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಶೇ.31ರಷ್ಟು ಹೆಚ್ಚಳವಾಗಿದೆ.
2025ರ ಆರಂಭದಲ್ಲಿ ಒಂದೊಳ್ಳೆ ಬಾಕ್ಸ್ ಆಫೀಸ್ ಪ್ರದರ್ಶನಕ್ಕೆ ಕಾಯುತ್ತಿದ್ದ ಬಾಲಿವುಡ್ಗೆ ಛಾವಾ ಗುಡ್ ನ್ಯೂಸ್ ಕೊಟ್ಟಿದೆ. ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಮುಂದುವರಿದಿದ್ದು, ಚಿತ್ರತಂಡ ಗೆಲುವಿನ ನಗೆ ಬೀರಿದೆ. ಹೌದು, ಬಹುನಿರೀಕ್ಷಿತ ಚಿತ್ರವು ಮೂರು ದಿನಗಳಲ್ಲಿ 116.5 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿದ 2025ರ ಮೊದಲ ಹಿಂದಿ ಚಿತ್ರವಾಗಿದೆ. ತನ್ನ ಮೊದಲ ಭಾನುವಾರ, ಅಂದರೆ ಕಳೆದ ದಿನ ಛಾವಾ ಭಾರತದಲ್ಲಿ 48.5 ಕೋಟಿ ರೂಪಾಯಿ (Net Collection) ಗಳಿಸಿದೆ. ಈ ಅಂಕಿ ಅಂಶ ಮೊದಲ ದಿನದ ಕಲೆಕ್ಷನ್ಗೂ ಹೆಚ್ಚಿದೆ.
ಛಾವಾ ಸಿನಿಮಾದ ಗಳಿಕೆಯಲ್ಲಿ ಮಹಾರಾಷ್ಟ್ರ ಪ್ರೇಕ್ಷಕರಿಂದ ಹೆಚ್ಚಿನ ಪಾಲಿದೆ. ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಂತಹ ದೊಡ್ಡ ನಗರಗಳಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಫೆಬ್ರವರಿ 16, ಭಾನುವಾರದಂದು ಛಾವಾ ಚಿತ್ರ ಶೇ.62.48ರಷ್ಟು ಹಿಂದಿ ಆಕ್ಯುಪೆನ್ಸಿ ಹೊಂದಿತ್ತು.
ಛಾವಾ ಬಾಕ್ಸ್ ಆಫೀಸ್ ಕಲೆಕ್ಷನ್:
ದಿನ | ಇಂಡಿಯಾ ನೆಟ್ ಕಲೆಕ್ಷನ್ |
ಮೊದಲ ದಿನ | 31 ಕೋಟಿ ರೂಪಾಯಿ. |
ಎರಡನೇ ದಿನ | 37 ಕೋಟಿ ರೂಪಾಯಿ. |
ಮೂರನೇ ದಿನ | 48.5 ಕೋಟಿ ರೂಪಾಯಿ (ಆರಂಭಿಕ ಅಂದಾಜು). |
ಒಟ್ಟು | 116.5 ಕೋಟಿ ರೂಪಾಯಿ. |