ಕೌಚರ್ ವೀಕ್ ಗ್ರ್ಯಾಂಡ್ ಫಿನಾಲೆಯಲ್ಲಿ ಗಮನ ಸೆಳೆದ ವಿಕ್ಕಿ ಕೌಶಲ್- ರಶ್ಮಿಕಾ ಮಂದಣ್ಣ (ETV Bharat) ನವದೆಹಲಿ: ಹ್ಯುಂಡೈ ಎಫ್‌ಡಿಸಿಐ ಇಂಡಿಯಾ ಕೌಚರ್ ವೀಕ್ ಫ್ಯಾಷನ್ ಶೋ ಪುನಃ ನನ್ನ ಮದುವೆಯ ದಿನಗಳನ್ನು ನೆನಪಿಸಿತು ಎಂದು ಬಾಲಿವುಡ್ ನಟ ವಿಜೇತ ವಿಕ್ಕಿ ಕೌಶಲ್ ಹೇಳಿದರು. ದಿಲ್ಲಿಯಲ್ಲಿ ಬುಧವಾರ ನಡೆದ ಹ್ಯುಂಡೈ ಎಫ್‌ಡಿಸಿಐ ಇಂಡಿಯಾ ಕೌಚರ್ ವೀಕ್ 2024ರ ಗ್ರ್ಯಾಂಡ್ ಫಿನಾಲೆಯಲ್ಲಿ ಶೇನ್ ಪೀಕಾಕ್ ವಿನ್ಯಾಸಗೊಳಿಸಿದ ಧಿರಿಸಿನಲ್ಲಿ ರಾಂಪ್ ವಾಕ್ ಮಾಡಿದ ಬಳಿಕ ಅವರು ತಮ್ಮ ಮನದಾಳದ ಮಾತು ಹೇಳಿಕೊಂಡರು.
ಪ್ರಸಿದ್ಧ ಫ್ಯಾಷನ್ ಶೋದ ಕೊನೆಯ ದಿನದಲ್ಲಿ ಖ್ಯಾತ ವಸ್ತ್ರ ವಿನ್ಯಾಸಗಾರರಾದ ಫಲ್ಗುಣಿ ಪೀಕಾಕ್ ಮತ್ತು ಶೇನ್ ಪೀಕಾಕ್ ಅವರು ಇತ್ತೀಚೆಗೆ ಸಿದ್ಧಪಡಿಸಿದ "ರಂಗ್ ಮಹಲ್" ಪ್ರಸ್ತುತಪಡಿಸಿದರು. ಸಾಂಪ್ರದಾಯಿಕ ಹಾಗೂ ಭಾರತೀಯ ಕರಕುಶಲತೆಗೆ ಸಾಕ್ಷಿಯಾದ ಡಿಸೈನರ್‌ವೇರ್‌ಗಳು ಅನಾವರಣಗೊಂಡು ಎಲ್ಲರಲ್ಲೂ ಕುತೂಹಲ ಮೂಡಿಸಿದವು.
ಮಿನುಗು ಮತ್ತು ಬೀಡ್‌ವರ್ಕ್‌ನಿಂದ ಅಲಂಕರಿಸಲ್ಪಟ್ಟ ಅದ್ಭುತವಾದ ಲೆಹೆಂಗಾದಲ್ಲಿ ರಶ್ಮಿಕಾ ಕಾಣಿಸಿಕೊಂಡರೆ, ಬೀಜ್-ಬಣ್ಣದ ಬಟನ್-ಅಪ್ ಬನಾರಸ್ ಬ್ರೋಕೇಡ್ ಶೆರ್ವಾನಿಯಲ್ಲಿ ವಿಕ್ಕಿ ಕೌಶಲ್ ಗಮನ ಸೆಳೆದರು. ಈ ಜೋಡಿ 'ಛಾವಾ' ಎಂಬ ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿರುವುದರಿಂದ ಎಲ್ಲರ ಕಣ್ಣು ಇವರ ಮೇಲೆಯೇ ನಟ್ಟಿತ್ತು. ವಿಕ್ಕಿ ಕೌಶಲ್ ಅವರೊಂದಿಗೆ ತೆರೆ ಹಂಚಿಕೊಳ್ಳಲು ಸಿದ್ಧವಾಗಿರುವ ರಶ್ಮಿಕಾ ಮಂದಣ್ಣ ಚಿತ್ರ ತಂಡದೊಂದಿಗೆ ಕೆಲಸ ಮಾಡಿದ ಅನುಭವ ಹಂಚಿಕೊಂಡರು. ವಿಕ್ಕಿ ಕೌಶಲ್ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ನಟಿಸಿದ್ದರೆ, ರಶ್ಮಿಕಾ ಅವರ ಪತ್ನಿ ಯೇಸುಬಾಯಿ ಭೋನ್ಸಾಲೆ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಮದುವೆ ದಿನ ನೆನಪಿಸಿದ ವಸ್ತ್ರ ವಿನ್ಯಾಸ:"ನಾನು ಫಲ್ಗುಣಿ ಶೇನ್ ಪೀಕಾಕ್‌ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಕೆಲವು ಕಾರ್ಯಕ್ರಮವನ್ನು ಲೈವ್ ಆಗಿ ವೀಕ್ಷಿಸಿರುವೆ. ಅವರು ಮಾಡಿರುವ ಕೆಲಸವನ್ನು ಕಂಡು ನಾನು ನಿಜವಾಗಿಯೂ ವಿಸ್ಮಯಗೊಂಡಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕತ್ರಿನಾಳನ್ನು ಕರೆದು ಅವಳಿಗೆ ಹೇಳಬೇಕೆಂದು ನನಗೆ ಅನ್ನಿಸಿತು. ಅನೇಕ ಬಟ್ಟೆಗಳು ನನ್ನ ಮದುವೆಯ ದಿನಗಳನ್ನು ಮರಳಿ ನನಗೆ ನೆನಪಿಸಿದವು. ಈ ಸುಂದರ ಕಾರ್ಯಕ್ರಮದ ಸಣ್ಣ ಭಾಗವಾಗಿ ಮಾಡಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ" ಎಂದು ವಿಕ್ಕಿ ಕೌಶಲ್ ಕಾರ್ಯಕ್ರಮದ ನಂತರದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಮನದ ಮಾತು ಹೇಳಿಕೊಂಡರು.
ಮದುವೆ ದಿನ ಈ ಡ್ರೆಸ್ ಧರಿಸಿದ್ದರು ಕತ್ರಿನಾ - ಕೌಶಲ್ತಮ್ಮ ವಿವಾಹ ದಿನ ಕತ್ರಿನಾ ಕೈಫ್ ಕೆಂಪು ಲೆಹೆಂಗಾವನ್ನು ಧರಿಸಿದ್ದರೆ, ವಿಕ್ಕಿ ಕೌಶಲ್ ದಂತದ ಶೇರ್ವಾನಿಯನ್ನು ಧರಿಸಿದ್ದರು. ಎರಡನ್ನೂ ಸೆಲೆಬ್ರಿಟಿ ನೆಚ್ಚಿನ ಫ್ಯಾಷನ್ ಡಿಸೈನರ್ ಸಬ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ್ದರು. ಕೌಚರ್ ವೀಕ್ ಶೋ ಬಳಿಕ ಒಂದರ ಹಿಂದೆ ಒಂದರಂತೆ "ಮಾಸ್ಟರ್ ಪೀಸ್"ಗಳನ್ನು ರಚಿಸುತ್ತಿರುವ ವಿನ್ಯಾಸಕಾರರಿಗೆ ಧನ್ಯವಾದ ತಿಳಿಸಿದ ರಶ್ಮಿಕಾ, ನನಗೆ ಭಾರತೀಯ ರಾಜಕುಮಾರಿಯಂತೆ ಭಾಸವಾಯಿತು ಎಂದು ತಮ್ಮ ಅನುಭವ ಹಂಚಿಕೊಂಡರು.
ಫ್ಯಾಷನ್ ಲೇಬಲ್‌ನ 20ನೇ ವರ್ಷ ಇದಾಗಿದ್ದರಿಂದ ಫಲ್ಗುಣಿ ಶೇನ್ ಪೀಕಾಕ್‌ಗೆ ಇದು ವಿಶೇಷವಾಗಿತ್ತು. ರಾಜಧಾನಿಯಲ್ಲಿ ಧಾರಾಕಾರ ಮಳೆಯ ನಡುವೆಯೂ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಅತಿಥಿಗಳು ಮತ್ತು ಮಾಧ್ಯಮಗಳಿಗೆ ಅವರು ಧನ್ಯವಾದ ಅರ್ಪಿಸಿದರು.
ಇದನ್ನೂ ಓದಿ:ಆಧಾರ್ ಕೇಂದ್ರದಲ್ಲಿನ ಸ್ಥಿತಿಗತಿಯನ್ನು ಖಂಡಿಸಿದ ನಿರ್ದೇಶಕ ಹನ್ಸಲ್ ಮೆಹ್ತಾ - Hansal Mehta