ಕನ್ನಡ ಚಿತ್ರರಂಗದಲ್ಲಿ ತಮ್ಮ ಅಮೋಘ ಅಭಿನಯ ಮತ್ತು ಕಂಠಸಿರಿಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳ ಮನಗೆದ್ದಿರುವ ಜನಪ್ರಿಯ ನಟ ವಸಿಷ್ಠ ಸಿಂಹ. ಸದ್ಯ 'ಲವ್ ಲೀ' ಚಿತ್ರದ ಗುಂಗಿನಲ್ಲಿರುವ ವಸಿಷ್ಟ ಸಿಂಹ ಅವರೀಗ ಬ್ಯಾಟ್ ಬಾಲ್ ಹಿಡಿದು ಫೀಲ್ಡ್ಗೆ ಹಾಜರಾಗಿದ್ದಾರೆ. ಹಾಗಾದ್ರೆ ವಸಿಷ್ಠ ಸಿಂಹ ಕ್ರಿಕೆಟ್ಗೆ ಎಂಟ್ರಿ ಕೊಟ್ರಾ ಅಂದುಕೊಂಡ್ರೆ ನಿಮ್ಮ ಊಹೆ ತಪ್ಪು. ವಸಿಷ್ಠ ಸಿಂಹ ನಟಿಸುತ್ತಿರೋ ಹೊಸ ಚಿತ್ರದ ಹೆಸರು 'ವಿಐಪಿ'. ಈ ಸಿನಿಮಾದ ಪಾತ್ರ ಕ್ರಿಕೆಟ್ಗೆ ಸಂಬಂಧಿಸಿದಂತೆ ತೋರುತ್ತಿದೆ.
ವಿಐಪಿ ಫಸ್ಟ್ ಲುಕ್ ಪೋಸ್ಟರ್ ಅನಾವರಣ:ಅದಿಚುಂಚನಗಿರಿ ಮಠದ ಜಗದ್ಗುರು ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಪೂಜ್ಯ ಪ್ರಸನ್ನನಾಥ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ವಿಐಪಿ ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದೆ. ಈ ಕಾರ್ಯಕ್ರಮದಲ್ಲಿ ನಾಯಕ ನಟ ವಸಿಷ್ಠ ಸಿಂಹ ಸೇರಿದಂತೆ ಚಿತ್ರತಂಡದವರು ಉಪಸ್ಥಿತರಿದ್ದರು. ಸದ್ಯ ಬಿಡುಗಡೆಯಾಗಿರುವ ಫಸ್ಟ್ ಲುಕ್ನಲ್ಲಿ ವಸಿಷ್ಠ ಸಿಂಹ ಬ್ಯಾಟ್ ಹಿಡಿದಿದ್ದಾರೆ. ಮಾಸ್ ಫೀಲ್ ಕೊಡುವಂತಹ ಚಿತ್ರದ ಪೋಸ್ಟರ್ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.
ಚಿತ್ರತಂಡ ಹೀಗಿದೆ; ವಿಭಿನ್ನ ಕಥಾಹಂದರ ಹಾಗೂ ಮೇಕಿಂಗ್ನಿಂದ ಸದ್ದು ಮಾಡುತ್ತಿರುವ ವಿಐಪಿ ಚಿತ್ರದಲ್ಲಿ ವಸಿಷ್ಠ ಸಿಂಹ ಅವರಿಗೆ ನಾಯಕಿಯಾಗಿ ತೇಜಸ್ವಿನಿ ಶರ್ಮಾ ಅಭಿನಯಿಸುತ್ತಿದ್ದಾರೆ. ಸುನೀಲ್ ಪುರಾಣಿಕ್, ಬಲ ರಾಜವಾಡಿ, ಅಫ್ಜಲ್, ಸ್ಪರ್ಶ ರೇಖಾ, ಸುಚೇಂದ್ರ ಪ್ರಸಾದ್, ಹನುಮಂತೇಗೌಡ, ರಾಮ್ ಕಶ್ಯಪ್, ರಣವೀರ್ ಸೇರಿದಂತೆ ಮುಂತಾದವರು ತಾರಾಬಳಗದಲ್ಲಿದ್ದಾರೆ.