ಪ್ರತೀ ಸಿನಿಮಾದಲ್ಲೂ ತಮ್ಮ ಕ್ರಿಯೇಟಿವಿಟಿ ಮೂಲಕ ಪ್ರೇಕ್ಷಕರೆದುರು ಬರುವ ನಿರ್ದೇಶಕ ತರುಣ್ ಸುಧೀರ್ ಅವರೀಗ ತಮ್ಮ ನಿಜಜೀವನದ ನಾಯಕಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ತರುಣ್ ಸುಧೀರ್ ಮತ್ತು ಸೋನಾಲ್ ಮೊಂತೆರೋ ಚಿತ್ರಮಂದಿರದ ಬ್ಯಾಕ್ ಟ್ರಾಪ್ನಲ್ಲಿ ಪ್ರಿವೆಡ್ಡಿಂಗ್ ವಿಡಿಯೋ ಶೂಟ್ ಮಾಡಿಸುವ ಮೂಲಕ ತಾವಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೇವೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದರು. ಇದೇ ಆಗಸ್ಟ್ 10 ಹಾಗೂ 11ರಂದು ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಪ್ಯಾಲೇಸ್ನಲ್ಲಿ ಎರಡು ಕುಟುಂಬಗಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಕುರಿತು ಮಾಹಿತಿ ನೀಡಲು ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮೊಂತೆರೋ ಅವರಿಂದು ಮಾಧ್ಯಮಗಳೆದುರು ಬಂದಿದ್ದರು.
ತಮ್ಮ ಮದುವೆ ಸಿದ್ಧತೆ ಹಾಗೂ ಸೋನಾಲ್ ಪರಿಚಯ ಆಗಿದ್ದು ಹೇಗೆ? ಎಂಬುದರ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಮೊದಲು ಮಾಹಿತಿ ಹಂಚಿಕೊಂಡರು. ಸೋನಾಲ್ ಅವರ ಮೊದಲ ಪರಿಚಯ ಆಗಿದ್ದು 'ರಾಬರ್ಟ್' ಸಿನಿಮಾ ಸಂದರ್ಭ. ಆಗ ನಮ್ಮ ನಡುವೆ ಯಾವುದೇ ಪ್ರೀತಿ ಇರಲಿಲ್ಲ. 2023ರಿಂದ ನನ್ನ ಮತ್ತು ಸೋನಾಲ್ ಬಾಂಡಿಂಗ್ ಶುರುವಾಯ್ತು. ಕಾಟೇರ ಸಿನಿಮಾ ಆರಂಭದಲ್ಲಿ ಎಲ್ಲರೂ ನೀವು ಒಳ್ಳೆ ಜೋಡಿ ಎಂದು ಹೇಳುತ್ತಿದ್ದರು. ಒಂದು ದಿನ ಸೋನಾಲ್ ಕರೆ ಮಾಡಿ, ನಾವಿಬ್ಬರು ಡೇಟಿಂಗ್ ನಡೆಸುತ್ತಿದ್ದೇವೆ ಎಂದು ಎಲ್ಲರೂ ಹೇಳುತ್ತಿದ್ದಾರೆ ಅಂದ್ರು. ನಾನು ಕೂಡಾ, ನನ್ನ ಸ್ನೇಹಿತರು ಸಹ ಹೀಗೆ ಹೇಳುತ್ತಿದ್ದಾರೆ ಅಂದಿದ್ದೆ. ನಿಜ ಹೇಳಬೇಕೆಂದರೆ ನಾನು ಮತ್ತು ಸೋನಾಲ್ ಫೆಬ್ರವರಿಯಲ್ಲಿ ಮಾತನಾಡಲು ಶುರು ಮಾಡಿದೆವು. ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಶುರು ಮಾಡಿದೆವು. ನನಗೆ ಕಾಟೇರ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ಕಾಣುತ್ತೆ ಅನ್ನೋ ನಂಬಿಕೆ ಇತ್ತು. ಅದರಂತೆ ಸಿನಿಮಾ ಕೂಡಾ ಯಶಸ್ಸು ಕಂಡಿತು. ಆಮೇಲೆ ನಾನೇ ಸೋನಾಲ್ ಅವರ ಮನೆಗೆ ಹೋಗಿ ಮಾತನಾಡಿದೆ ಎಂದು ತಿಳಿಸಿದರು.
ಇನ್ನು ನನ್ನ ಮತ್ತು ಸೋನಾಲ್ ಕುಟುಂಬದಲ್ಲಿ ಧರ್ಮದ ಬಗ್ಗೆ ಯಾವುದೇ ಕಾಂಪ್ಲಿಕೇಷನ್ ಬರಲಿಲ್ಲ. ಮನೆಯಲ್ಲಿ ಯಾವುದೇ ಸಮಸ್ಯೆ ಆಗಲಿಲ್ಲ. ಇಬ್ಬರೂ ಪರಸ್ಪರರ ಧರ್ಮವನ್ನು ಗೌರವಿಸುತ್ತೇವೆ. ಇಬ್ಬರ ಯೋಚನೆಗಳು ಒಂದೇ ರೀತಿ ಇವೆ. ಹಾಗಾಗಿ ನಾವಿಬ್ಬರು ಮದುವೆ ಮಾಡಿಕೊಳ್ಳಲು ಒಪ್ಪಿಗೆ ಕೊಟ್ಟೆವು ಎಂದು ಹೇಳಿದರು.
'ರಾಬರ್ಟ್' ಸಿನಿಮಾ ಶೂಟಿಂಗ್ ಸೆಟ್ನಲ್ಲಿ ದರ್ಶನ್ ಸರ್ ಕಾಲೆಳೆಯುತ್ತಿದ್ದರು. ಸೋನಾಲ್ಗೆ ಒಳ್ಳೆ ಫ್ರೇಮ್ ಇಡ್ತೀಯಾ, ಅವಳಿಗೆ ಲೈನ್ ಹೊಡೆಯುತ್ತಿದ್ದೀಯಾ ಅಂತೆಲ್ಲಾ ಹೇಳುತ್ತಿದ್ದರು. ಆಗ, ಇಲ್ಲಾ ಬಾಸ್ ಅಂತಾ ತಪ್ಪಿಸಿಕೊಳ್ಳುತ್ತಿದ್ದೆ. ನಮ್ಮಿಬ್ಬರ ಮದುವೆ ಕಾರ್ಡ್ ಕೋಡೊದಿಕ್ಕೆ ಹೋದಾಗಲೂ ಸಹ ವೆಡ್ಡಿಂಗ್ ಪ್ರಿಪರೇಷನ್ ಬಗ್ಗೆ ಮಾತನಾಡಿದ್ದರು. ಯಾವುದೇ ಕಾರಣಕ್ಕೂ ಡೇಟ್ ಮುಂದೆ ಹಾಕಬೇಡ ಎಂದು ಹೇಳಿದ್ದರು. ದರ್ಶನ್ ಸರ್ ನನ್ನ ಮದುವೆ ವಿಚಾರವಾಗಿ ಸೋನಾಲ್ ಮನೆಯಲ್ಲಿ ಮಾತನಾಡಿದ್ದರು. ಆದ್ರೆ ನಮ್ಮ ಮದುವೆಗೆ ದರ್ಶನ್ ಸರ್ ಬರಲು ಆಗುತ್ತಿಲ್ಲ ಎಂಬ ಬೇಸರವಿದೆಯೆಂದು ತಿಳಿಸಿದರು.