ಒಟಿಟಿ ಸೀರಿಸ್' ಆರ್ಯ' ಸೀಸನ್ 3ರಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿರುವ ಮಾಜಿ ಮಿಸ್ ಯೂನಿವರ್ಸ್ ಸುಶ್ಮಿತಾ ಸೇನ್ ಇತ್ತೀಚೆಗೆ ತಮ್ಮ ಮದುವೆ ಯೋಜನೆಗಳ ಬಗ್ಗೆ ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಬಾಲಿವುಡ್ ನಟಿ, "ಶೀಘ್ರದಲ್ಲೇ ಯಾವಾಗ ಬೇಕಾದರೂ ಮದುವೆಯಾಗುವ ಯೋಜನೆ" ಬಗ್ಗೆ ಅನಿಸಿಕೆ ಹಂಚಿಕೊಂಡರು. ಸುಶ್ಮಿತಾ ಸೇನ್ ಪ್ರಸ್ತುತ ಮಾಡೆಲ್ ಹಾಗು ನಟ ರೋಹ್ಮನ್ ಶಾಲ್ ಅವರೊಂದಿಗೆ ರಿಲೇಶನ್ಶಿಪ್ನಲ್ಲಿದ್ದಾರೆ.
"ನಾನು ಸೆಟಲ್ ಆಗುವ ಬಗ್ಗೆ ಕಾಳಜಿ ವಹಿಸಬೇಕೆಂದು ಜಗತ್ತು ಯೋಚಿಸುತ್ತಿರುವ ಕುರಿತು ಬಲ್ಲೆ. ಆ ಬಗ್ಗೆ ತಲೆಕೆಡಿಸಿಕೊಳ್ಳಲಾರೆ. ಮದುವೆ ಕಾನ್ಸೆಪ್ಟ್ ಅನ್ನು ನಾನು ಇಷ್ಟಪಡುತ್ತೇನೆ ಮತ್ತು ಗೌರವಿಸುತ್ತೇನೆ. ಆರ್ಯ ನಿರ್ದೇಶಕ (ರಾಮ್ ಮಾಧ್ವಾನಿ) ಮತ್ತು ನಿರ್ಮಾಪಕಿ (ಅಮಿತಾ ಮಾಧ್ವಾನಿ) ಸೇರಿದಂತೆ ಕೆಲವು ಅದ್ಭುತ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳುವ ಸೌಭಾಗ್ಯ ನನಗೆ ಸಿಕ್ಕಿತು. ಇವರು ನಾ ಕಂಡ ಅತ್ಯಂತ ಸುಂದರ ಜೋಡಿ. ನಾನು ಸ್ನೇಹ ಮೇಲೆ ಅತಿಯಾದ ನಂಬಿಕೆ ಇಟ್ಟವಳು. ಇದು ಅಸ್ತಿತ್ವದಲ್ಲಿದ್ದರೆ, ಏನಾದರೂ ಸಂಭವಿಸಬಹುದು. 'ಗೌರವ' ಮತ್ತು 'ಸ್ನೇಹ' ಬಹಳ ಮುಖ್ಯ ವಿಚಾರಗಳು. ಇದೇ ವೇಳೆ ಸ್ವಾತಂತ್ರ್ಯವೂ ಕೂಡ ಬಹಳ ಮುಖ್ಯ" ಎಂದು ತಿಳಿಸಿದರು.
ಸುಶ್ಮಿತಾ ಮತ್ತು ಮಾಡೆಲ್ ರೋಹ್ಮನ್ ಶಾಲ್ 2018ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದರು. ಆರಂಭದ ಸಂಬಂಧ 2021ರಲ್ಲಿ ಬೇರ್ಪಟ್ಟಿತ್ತು. "ಸ್ನೇಹ ಪ್ರಾರಂಭವಾಯಿತು, ನಾವು ಸ್ನೇಹಿತರಾಗಿಯೇ ಇದ್ದೇವೆ. ರಿಲೇಶನ್ಶಿಪ್ ಮುಗಿಯಿತು. ಪ್ರೀತಿ ಉಳಿದಿದೆ" ಎಂದು ನಟಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬ್ರೇಕ್ಅಪ್ ಬಗ್ಗೆ ಸುಳಿವು ನೀಡಿದ್ದರು. ಮಿಲಿಯನೇರ್ ಲಲಿತ್ ಮೋದಿ ಅವರೊಂದಿಗೂ ನಟಿಯ ಹೆಸರು ಥಳಕು ಹಾಕಿಕೊಂಡಿತ್ತು.