ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಅವರು ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಬಿಚ್ಚುಗತ್ತಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿರುವ ರಾಜವರ್ಧನ್ ಇತ್ತೀಚೆಗಷ್ಟೇ 'ಹಿರಣ್ಯ' ಶೀರ್ಷಿಕೆಯ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬಂದಿದ್ದರು. ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಗಜರಾಮ'.
ಟೈಟಲ್ ಹಾಗೂ ಒಂದಷ್ಟು ಝಲಕ್ ಮೂಲಕ ಕುತೂಹಲ ಹೆಚ್ಚಿಸಿರುವ 'ಗಜರಾಮ' ಸಿನಿಮಾದ ಸ್ಪೆಷಲ್ ಸಾಂಗ್ ರಿಲೀಸ್ ಆಗಿದೆ. ಮೇಕಿಂಗ್ ಹಂತದಲ್ಲಿ ಟಾಕ್ ಕ್ರಿಯೇಟ್ ಮಾಡಿದ್ದ ಸಾರಾಯಿ ಶಾಂತಮ್ಮ ಹಾಡು ಈಗ ಆನಂದ್ ಆಡಿಯೋ ಯೂಟ್ಯೂಬ್ನಲ್ಲಿ ಅನಾವರಣಗೊಂಡಿದೆ. ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಾರಾಯಿ ಶಾಂತಮ್ಮ ಸಾಂಗ್ ರಿಲೀಸ್ ಆಗಿದ್ದು, ಈವೆಂಟ್ನಲ್ಲಿ ನಟ ರಾಜವರ್ಧನ್, ನಟಿ ರಾಗಿಣಿ ಸೇರಿದಂತೆ ಇಡೀ ತಂಡ ಭಾಗಿಯಾಗಿತ್ತು.
ಹಾಡು ಬಿಡುಗಡೆ ಬಳಿಕ ನಟ ರಾಜವರ್ಧನ್ ಮಾತನಾಡಿ, ಈ ಹಾಡಿಗಾಗಿ ತುಂಬಾ ಕಾಯುತ್ತಿದ್ದೆವು. ವಿಡಿಯೋ ಸಾಂಗ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಗಜರಾಮ ಸಿನಿಮಾ ಒಂದು ಕಡೆಯಾದರೆ, ಈ ಸಾಂಗ್ ಒಂದು ಕಡೆ. ಈ ಹಾಡಿಗೆ ಸಾಕಷ್ಟು ಖರ್ಚಾಗಿದೆ. ಸಾಮಾನ್ಯವಾಗಿ ಈ ರೀತಿಯ ಹಾಡನ್ನು ಮಾಡಲು ಕಷ್ಟ ಆಗುತ್ತದೆ. ಆದ್ರೆ ಸಾಂಗ್ ಅದ್ಭುತವಾಗಿ ಮೂಡಿಬಂದಿದೆ. ಚಿನ್ಮಯ್ ಸರ್ ಒಳ್ಳೆ ಲಿರಿಕ್ಸ್ ಬರೆದುಕೊಟ್ಟರು. ಧನು ಮಾಸ್ಟರ್ ಅದ್ಭುತ ಕೊರಿಯೋಗ್ರಫಿ ಮಾಡಿದ್ದಾರೆ. ನಿರ್ದೇಶಕರು ಸಿನಿಮಾಗಾಗಿ ಸಾಕಷ್ಟು ದುಡಿದಿದ್ದಾರೆ. ಇಡೀ ತಂಡದ ಶ್ರಮದಿಂದ ಸಿನಿಮಾವನ್ನು ಚೆನ್ನಾಗಿ ಮಾಡಿದ್ದೇವೆ ಎಂದರು.
ನಟಿ ರಾಗಿಣಿ ದ್ವಿವೇದಿ ಮಾತನಾಡಿ, ತುಂಬಾ ಖುಷಿಯಾಗುತ್ತಿದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿರುವ ಸಂತಸ ಇದೆ. ಒಂದು ವರ್ಷದಿಂದ ಈ ಚಿತ್ರದಲ್ಲಿ ಪಯಣ ಮಾಡಿಕೊಂಡು ಬರುತ್ತಿದ್ದೇವೆ. ಹಾಡಿನಲ್ಲಿ ರಾಜ್ ತುಂಬಾ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ. ಮನೋಮೂರ್ತಿ ಸರ್ ಇಷ್ಟು ಒಳ್ಳೆಯ ಮ್ಯೂಸಿಕ್ ಕೊಡುತ್ತಾರೆ ಎಂದುಕೊಂಡಿರಲಿಲ್ಲ. ಈ ಹಾಡು ಕೇಳಿ ಎಲ್ಲರಿಗೂ ಒಂದೊಳ್ಳೆ ಪಾಸಿಟಿವ್ ವೈಬ್ಸ್ ಬಂದಿದೆ ಎಂದುಕೊಳ್ಳುತ್ತೇನೆ. ಸಿನಿಮಾ ಮಾಡೋದು ತುಂಬಾ ಕಷ್ಟ. ಬಹಳ ತಾಳ್ಮೆಯಿಂದ, ಹಾರ್ಡ್ ವರ್ಕ್ನಲ್ಲಿ ಸಿನಿಮಾ ಮಾಡುವುದು ಒಂದು ಚಾಲೆಂಜ್ ಎಂದರು.