ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ಕಿರಣ್ ರಾಜ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸದ್ಯ 'ರಾನಿ' ಚಿತ್ರತಂಡ ಹಾಡೊಂದನ್ನು ಉಡುಗೊರೆ ನೀಡುವ ಮೂಲಕ ಹುಟ್ಟಿದ ದಿನಕ್ಕೆ ಶುಭಾಶಯ ಕೋರಿದೆ. ಪ್ರಮೋದ್ ಮರವಂತೆ ಅವರು ಬರೆದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿರುವ 'ಹವಾಮಾನವೇ ಸುಂದರ ಸುಂದರ..' ಎಂಬ ಹಾಡು ಟಿ-ಸೀರೀಸ್‍ನ ಯೂಟ್ಯೂಬ್ ಚಾನಲ್‍ನಲ್ಲಿ ಬಿಡುಗಡೆಯಾಗಿದೆ.
ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಕಿರಣ್ ರಾಜ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದು, ಅವರಿಗೆ ಜೋಡಿಯಾಗಿ ಸಮೀಕ್ಷಾ ಹಾಗೂ ರಾಧ್ಯಾ ಅಭಿನಯಿಸಿದ್ದಾರೆ.
ಹುಟ್ಟುಹಬ್ಬ ಹಾಗೂ ಹಾಡು ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಕಿರಣ್ ರಾಜ್, ''ಒಂದು ಹಂತದಲ್ಲಿ ನನಗೆ ಜೀವನದಲ್ಲಿ ಮುಂದೇನು ಎಂಬ ಪ್ರಶ್ನೆ ಎದುರಾಯಿತು. ಆಗ ನನಗೆ, ರಾನಿ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ಸಿಕ್ಕರು. ನನಗೂ ಈ ಚಿತ್ರದ ಕಥೆ ಇಷ್ಟವಾಯಿತು. ಚಿತ್ರದ ಕಥೆ ಕಾಲ್ಪನಿಕವಾದರೂ, ಪ್ರತಿಯೊಬ್ಬರಿಗೂ ನನ್ನ ಪಾತ್ರ ಹತ್ತಿರವಾಗುತ್ತದೆ. ಹೆವಿ ಬಜೆಟ್ನ ಚಿತ್ರವಿದು. ಕೆಲವರು ನನ್ನ ಸಿನಿಮಾಗೆ ಯಾಕೆ ಇಷ್ಟೊಂದು ಖರ್ಚು ಮಾಡುತ್ತಿದ್ದೀರಾ? ಎಂದು ನಿರ್ಮಾಪಕರನ್ನು ಕೇಳಿರಬಹುದು. ಆದರೆ ನಮ್ಮ ನಿರ್ಮಾಪಕರು ವ್ಯಕ್ತಿಗಿಂತ ವ್ಯಕ್ತಿತ್ವಕ್ಕೆ ಬೆಲೆ ಕೊಡುವವರು. ಹಾಗಾಗಿ, ಹಣಕಾಸಿನ ವಿಚಾರಕ್ಕಿಂತ ಒಳ್ಳೆಯ ಸಿನಿಮಾ ಮಾಡಿದ್ದಾರೆ'' ಎಂದು ಹೇಳಿದರು.