ಕಾಲೇಜ್, ಮಾಲ್ ಎಲ್ ನೋಡಿದ್ರೂ 'ಗೌರಿ'ಯದ್ದೇ ಹವಾ. ಕನ್ನಡದ ಕ್ರಿಯೇಟಿವ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ. ಪಿ ಲಂಕೇಶ್ ಕುಟುಂಬದ ಮೂರನೇ ತಲೆಮಾರು ಅಂದ್ರೆ ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆ, ಚಿತ್ರದ ನಿರ್ದೇಶಕ-ನಿರ್ಮಾಪಕ ಇಂದ್ರಜಿತ್ ಲಂಕೇಶ್ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಚಿತ್ರದ ಪ್ರಮೋಷನ್ ಮಾಡುತ್ತಿದ್ದಾರೆ.
ಅದರಂತೆ ಇತ್ತೀಚೆಗೆ ಮಾಲ್ ಒಂದರಲ್ಲಿ "ಗೌರಿ" ಚಿತ್ರದ ಪ್ರೀ ರಿಲೀಸ್ ಇವೆಂಟ್ ಅನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಸ್ಯಾಂಡಲ್ವುಡ್ನ ರಿಯಲ್ ಸ್ಟಾರ್ ಉಪೇಂದ್ರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ "ಗೌರಿ" ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಈ ಸಂದರ್ಭ ನಾಯಕ ನಾಯಕಿ ಸೇರಿದಂತೆ ಇಡೀ ಗೌರಿ ತಂಡ ಉಪಸ್ಥಿತವಿತ್ತು.
ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದ ರಿಯಲ್ ಸ್ಟಾರ್ ಉಪೇಂದ್ರ, ಇಂದ್ರಜಿತ್ ಅವರದ್ದು ಗೋಲ್ಡನ್ ಹ್ಯಾಂಡ್. ದೀಪಿಕಾ ಪಡುಕೋಣೆ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದು ಬ್ರೇಕ್ ಕೊಟ್ಟರು. ಅವರೀಗ ಇಂಟರ್‌ನ್ಯಾಷನಲ್ ಸ್ಟಾರ್. ಇವರ ಮಗ ಯಾವುದಾದರೂ ದೃಷ್ಟಿಯಲ್ಲಿ ಇಲ್ಲಿರುತ್ತಾರೆ ಅನಿಸುತ್ತಾ?. ಬಾಲಿವುಡ್ಗೋ, ಹಾಲಿವುಡ್ಗೋ ಹೋಗೋ ತರ ಇದ್ದಾರೆ. ಅವರನ್ನು ಇಲ್ಲೇ ಇರಿಸಿಕೊಳ್ಳೋ ಶಕ್ತಿ ನಿಮ್ಮ ಕೈಲಿದೆ. ಹೊಸ ತಲೆಮಾರಿನವರನ್ನು ನಮ್ಮ ಕನ್ನಡ ಚಿತ್ರರಂಗದಲ್ಲಿ ಉಳಿದುಕೊಳ್ಳೋದು ನಿಮ್ಮ ಕೈಯಲ್ಲಿ ಮಾತ್ರ ಸಾಧ್ಯ. ಹಾಗಾಗಿ ನೀವು ಸಿನಿಮಾ ವೀಕ್ಷಿಸಬೇಕು ಎಂದು ಕೇಳಿಕೊಂಡರು.
ಈ ಬ್ಯೂಟಿ ಮತ್ತು ಬುದ್ಧಿವಂತಿಕೆ ಮುಗ್ಧತೆಯಿಂದ ಬರುತ್ತದೆ. ಮುಗ್ಧತೆಯೇ ಬ್ಯೂಟಿ. ಇವರ ಮುಖ ನೋಡಿ. ಇವರಿಗೆ ನಾನು ಹಾರೈಸುವುದು ಮುಖ್ಯವಲ್ಲ. ನೀವು ಹಾರೈಸಬೇಕು. ಫಸ್ಟ್ ಡೇ, ಫಸ್ಟ್ ಶೋ ಅನ್ನು ಎಲ್ಲರೂ ನೋಡಿ. ಇವರ ಸಿನಿಮಾ ನೋಡಿದ್ರೆ ನಮಗೂ ಖುಷಿಯಾಗುತ್ತದೆ. ಇಂದ್ರಜಿತ್ ಅವರು ಶೋಮ್ಯಾನ್. ಇಂತಹ ಕಾರ್ಯಕ್ರಮ ಆಯೋಜಿಸಲು ಅವರಿಂದಲೇ ಸಾಧ್ಯ. ಸಿನಿಮಾ ಸಹ ಅದೇ ರೀತಿ ಮಾಡಿರುತ್ತಾರೆ. ಕಾರ್ಯಕ್ರಮವನ್ನೇ ಹೀಗೆ ಮಾಡಿದ್ದಾರೆ, ಇನ್ನೂ ಸಿನಿಮಾ ಹೇಗೆ ಮಾಡಿರಬಹುದು ಯೋಚಿಸಿ ಎಂದು ಪ್ರಶಂಸಿಸಿದರು.
ಅಷ್ಟೇ ಅಲ್ಲ, ಸಮರ್ಜಿತ್ ಲವ್‍ಸ್ಟೋರಿಗಳಿಗೂ ಸೂಟ್ ಆಗುತ್ತಾರೆ. ಆ್ಯಕ್ಷನ್ ಚಿತ್ರಗಳಿಗೂ ಹೊಂದುತ್ತಾರೆ. ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ, ಜೊತೆಗೆ ಡ್ಯಾನ್ಸ್ ಅನ್ನೂ ಬಹಳ ಚೆನ್ನಾಗಿ ಮಾಡುತ್ತಾರೆ. ಜನರು ಈಗಾಗಲೇ ಹೃತಿಕ್ ರೋಶನ್ ಅಂತ ಹೇಳೋಕೆ ಶುರು ಮಾಡಿದ್ದಾರೆ. ನೀವು ನಿಮ್ಮ ಈ ಮುಗ್ಧತೆಯನ್ನು ಉಳಿಸಿಕೊಳ್ಳಿ. ಎಷ್ಟು ಮುಗ್ಧನಪ್ಪಾ ನೀನು. ಇಲ್ಲಿ ಮುಗ್ಧತೆ ಉಳಿಸಿಕೊಳ್ಳೋದು ಬಹಳ ಕಷ್ಟ. ಸ್ವಲ್ಪ ದಿನ ಚಿತ್ರರಂಗದಲ್ಲಿ ಇದ್ದರೆ ಸಾಕು, ನಾವೆಲ್ಲಾ ಬಹಳ ಕಿಲಾಡಿಗಳಾಗಿಬಿಡುತ್ತೇವೆ. ಚಿಕ್ಕವರಾಗಿದ್ದಾಗ ಬಹಳ ಮುಗ್ಧರಾಗಿರುತ್ತೇವೆ. ಕೆಲವರು ವಯಸ್ಸಾದ ಮೇಲೂ ಹಾಗೇ ಇರುತ್ತಾರೆ. ಕೆಲವರು ಮಾತ್ರ ತಮಗೆ ಎಲ್ಲಾ ಗೊತ್ತು ಎಂದು ಮುಗ್ಧತೆ ಕಳೆದುಕೊಂಡುಬಿಡುತ್ತಾರೆ ಎಂದು ರಿಯಲ್ ಸ್ಟಾರ್ ಉಪೇಂದ್ರ ಅವರು ಸಮರ್ಜಿತ್ ಲಂಕೇಶ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.