ಹೈದರಾಬಾದ್:ಸೈಬರ್ ಕ್ರೈಂ ವಿರುದ್ಧದ ಅಭಿಯಾನಕ್ಕೆ ನಟಿ ರಶ್ಮಿಕಾ ಮಂದಣ್ಣ ಅವರು ರಾಷ್ಟ್ರೀಯ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಕೇಂದ್ರ ಗೃಹ ಇಲಾಖೆ ವ್ಯಾಪ್ತಿಯ ಭಾರತೀಯ ಸೈಬರ್ ಕ್ರೈಂ ಸಮನ್ವಯ ಕೇಂದ್ರ ಈ ಕುರಿತು ಪ್ರಕಟಿಸಿದ್ದು, ಸೈಬರ್ ಸುರಕ್ಷತೆಯನ್ನು ಉತ್ತೇಜಿಸುವ ಅಭಿಯಾನದಲ್ಲಿ ನಟಿ ಭಾಗಿಯಾಗಲಿದ್ದಾರೆ. ಜೊತೆಗೆ, ದೇಶಾದ್ಯಂತ ಹೆಚ್ಚುತ್ತಿರುವ ಸೈಬರ್ ಕ್ರೈಂಗಳ ಕುರಿತು ಜಾಗೃತಿ ಮೂಡಿಸಲಿದ್ದಾರೆ.
ಈ ಮೊದಲು ಸೈಬರ್ ಕ್ರೈಂನಿಂದಾಗಿ ರಶ್ಮಿಕಾ ಕೂಡಾ ಸಮಸ್ಯೆ ಎದುರಿಸಿದ್ದರು. ಅವರ ಡೀಪ್ ಫೇಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ತೀವ್ರ ಸಂಚಲನ ಮೂಡಿಸಿತ್ತು. ಆ ಬಳಿಕ ನಟಿ ಪ್ರಕರಣ ದಾಖಲಿಸಿದ್ದರು. ನಂತರ ಆರೋಪಿಗಳನ್ನು ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದರು. ಇದರಿಂದಾಗಿ ಸೈಬರ್ ಪ್ರಕರಣಗಳ ಕುರಿತು ರಶ್ಮಿಕಾ ಜಾಗೃತರಾಗಿ, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಮುಂದಾಗಿದ್ದರು.
"ಸೈಬರ್ ಅಪರಾಧಗಳ ಕುರಿತು ಜನರು ಜಾಗೃತರಾಗಬೇಕು. ನಾವು ಡಿಜಿಟಲ್ ಯುಗದಲ್ಲಿ ವಾಸಿಸುತ್ತಿದ್ದೇವೆ ಮತ್ತು ಸೈಬರ್ ಅಪರಾಧವು ಸಾರ್ವಕಾಲಿಕ ಉತ್ತುಂಗದಲ್ಲಿದೆ. ಅದರ ಪರಿಣಾಮವನ್ನು ಅನುಭವಿಸಿದ ವ್ಯಕ್ತಿಯಾಗಿ, ನಮ್ಮ ಆನ್‌ಲೈನ್ ಜಗತ್ತನ್ನು ರಕ್ಷಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸುಸಮಯವಿದು" ಎಂದು ಇನ್ಸ್ಟಾಗ್ರಾಮ್ನಲ್ಲಿ ರಶ್ಮಿಕಾ ವಿಡಿಯೋ ಶೇರ್ ಮಾಡಿದ್ದಾರೆ.