ಕರ್ನಾಟಕ

karnataka

ETV Bharat / entertainment

ಬನಾರಸ್​ ಸೀರೆಯ ಪ್ರಚಾರದಲ್ಲಿ ರಣವೀರ್ ಸಿಂಗ್, ಕೃತಿ ಸನೋನ್: ಕಾಶಿಘಾಟ್​ನಲ್ಲಿ ರ‍್ಯಾಂಪ್ ವಾಕ್​​ - Ranveer Singh and Kriti Sanon

ಬಾಲಿವುಡ್​ ನಟ ರಣವೀರ್ ಸಿಂಗ್ ಮತ್ತು ನಟಿ ಕೃತಿ ಸನೋನ್ ಕಾಶಿಯ ಗಂಗಾ ಘಾಟ್‌ನಲ್ಲಿ ಬನಾರಸಿ ಸೀರೆಯನ್ನು ಪ್ರಚಾರ ಮಾಡಲು ರ‍್ಯಾಂಪ್ ವಾಕ್ ಮಾಡಿದರು. ಈ ಬಟ್ಟೆಗಳನ್ನು ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ್ದಾರೆ.

Ranveer Singh and Kriti Sanon create magic at Kashi Ghat, 40 models walk on the ramp
ನಟ ರಣವೀರ್ ಸಿಂಗ್ ಮತ್ತು ನಟಿ ಕೃತಿ ಸನೋನ್

By ETV Bharat Karnataka Team

Published : Apr 15, 2024, 9:24 AM IST

Updated : Apr 15, 2024, 10:26 AM IST

ಬನಾರಸ್​​ ಸೀರೆಯ ಪ್ರಚಾರದಲ್ಲಿ ರಣವೀರ್ ಸಿಂಗ್ ಮತ್ತು ಕೃತಿ ಸನೋನ್

ವಾರಾಣಸಿ (ಉತ್ತರ ಪ್ರದೇಶ) :ಬಾಲಿವುಡ್​ ನಟ ರಣವೀರ್ ಸಿಂಗ್ ಮತ್ತು ನಟಿ ಕೃತಿ ಸನೋನ್ ಬನಾರಸಿ ಸೀರೆಯನ್ನು ಪ್ರಚಾರ ಮಾಡಲು ಕಾಶಿಯ ಗಂಗಾ ಘಾಟ್‌ನಲ್ಲಿ ಭಾನುವಾರ ಸಂಜೆ ರ‍್ಯಾಂಪ್ ವಾಕ್ ಮಾಡಿದರು. ಇವರೊಂದಿಗೆ ದೇಶದ 40 ಪ್ರಸಿದ್ಧ ರೂಪದರ್ಶಿಗಳು ಭಾಗವಹಿಸಿದ್ದರು. ಪ್ರಸಿದ್ಧ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಮೇಲ್ವಿಚಾರಣೆಯಲ್ಲಿ ಬನಾರಸಿ ರೇಷ್ಮೆ ಬಟ್ಟೆಗಳ ಪ್ರಚಾರವನ್ನು ಮಾಡಲಾಯಿತು.

ಹಿಂದಿ ಚಿತ್ರರಂಗದ ತಾರೆಯರು ಗಂಗಾ ಘಾಟ್‌ಗೆ ಇಳಿದಿದ್ದರು. ಫ್ಯಾಷನ್ ಶೋನಲ್ಲಿ ಎರಡು ಹೆಜ್ಜೆ ಇಡುವ ಮೂಲಕ ಬನಾರಸಿ ನೇಯ್ಗೆಯನ್ನು ಜಾಗತಿಕ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಬಾಗಿಲು ತೆರೆದರು. ಈ ಅಂತಾರಾಷ್ಟ್ರೀಯ ಕಾರ್ಯಕ್ರಮದಿಂದ ಬನಾರಸಿ ಕರಕುಶಲ ವಸ್ತುಗಳು ವಿಶ್ವ ಮಾರುಕಟ್ಟೆಯಲ್ಲಿ ಇನ್ಮುಂದೆ ಮಿಂಚಲಿವೆ ಎಂಬ ಭರವಸೆ ಮೂಡಿದೆ. ಈ ಸ್ಥಳದ ಪರಂಪರೆ ಮತ್ತು ಅಭಿವೃದ್ಧಿ ಫ್ಯಾಷನ್ ಶೋ ಕಾರ್ಯಕ್ರಮದ ಥೀಮ್‌ ಆಗಿತ್ತು.

ರಣವೀರ್ ಸಿಂಗ್ ಮತ್ತು ಕೃತಿ ಸನೋನ್

ಶ್ರೀಲಂಕಾ, ಜಿಂಬಾಬ್ವೆ, ಉಗಾಂಡಾ, ಮಾಲಿ, ಟೋಗೊ, ಪೆರು, ಪನಾಮ ಮೊದಲಾದ 20 ದೇಶಗಳ ರಾಯಭಾರಿಗಳೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಂಡಿಯನ್ ಮೈನಾರಿಟಿ ಫೌಂಡೇಶನ್ ಮತ್ತು ರಾಜ್ಯಸಭಾ ಸಂಸದರಾದ ಶ್ರೀ ಸತ್ನಮ್ ಸಿಂಗ್ ಸಂಧು ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬನಾರಸಿ ನೇಕಾರರ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು : ''ಕೈಮಗ್ಗ ಮತ್ತು ಪವರ್ ಲೂಮ್ ಮತ್ತು ಇತರ ಕರಕುಶಲ ವಸ್ತುಗಳಿಂದ ತಯಾರಿಸಿದ ಬಟ್ಟೆಗಳನ್ನು ಪ್ರಚಾರ ಮಾಡಲು ಬನಾರಸ್‌ನಲ್ಲಿ ಫ್ಯಾಷನ್ ಶೋ ಆಯೋಜಿಸಲಾಗಿದೆ'' ಎಂದು ರಾಜ್ಯಸಭಾ ಸಂಸದ ಸತ್ನಾಮ್ ಸಿಂಗ್ ಸಂಧು ಹೇಳಿದರು.

ಕೃತಿ ಸನೋನ್

''ಜಾಗತಿಕ ಮಟ್ಟದಲ್ಲಿ ಬನಾರಸಿ ನೇಕಾರರಿಗೆ ಮನ್ನಣೆ ನೀಡುವ ಪ್ರಯತ್ನ ನಡೆಯುತ್ತಿದೆ. ಈ ಸ್ಥಳದ ಪರಂಪರೆಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡಲು ಭವಿಷ್ಯದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಖ್ಯಾತ ವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರು ನೇಯ್ಗೆಗೆ 22 ನೇಕಾರರನ್ನು ನೇಮಿಸಿಕೊಂಡಿದ್ದಾರೆ. ಅವರಿಗೆ ಗುತ್ತಿಗೆ ನೀಡುವ ಪ್ರಕ್ರಿಯೆ ಪೂರ್ಣಗೊಂಡಿದೆ. ಬನಾರಸಿ ನೇಕಾರರ ಉತ್ಪನ್ನಗಳನ್ನು ದೇಶ ಮತ್ತು ವಿದೇಶದಲ್ಲಿರುವ ಮನೀಶ್ ಮಲ್ಹೋತ್ರಾ ಅವರ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತದೆ'' ಎಂದರು.

ರಣವೀರ್ ಸಿಂಗ್ ಮತ್ತು ಕೃತಿ ಸನೋನ್ ಹಾಗೂ ಮನೀಶ್ ಮಲ್ಹೋತ್ರಾ

''ಬನಾರಸಿ ಕಸುಬಿಗೆ ಸಂಬಂಧಿಸಿದ 40 ಮಂದಿಯನ್ನು ಇದೇ ವೇಳೆ ಸನ್ಮಾನಿಸಲಾಯಿತು. ಇದರಲ್ಲಿ 22 ನೇಕಾರರೂ ಸೇರಿದ್ದು, ಇದರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೂ ಇದ್ದಾರೆ. ಅಂತಹ 10 ಮಂದಿ ವ್ಯಾಪಾರಿಗಳೂ ಇದ್ದಾರೆ. ಅವರು ತಮ್ಮ ವ್ಯವಹಾರ ಕೌಶಲ್ಯದ ಆಧಾರದ ಮೇಲೆ ಬನಾರಸಿ ನೇಯ್ಗೆಯನ್ನು ಜಿಲ್ಲೆಯಿಂದ ಆಚೆಗೆ ದೇಶ ಮತ್ತು ಪ್ರಪಂಚದ ಮಾರುಕಟ್ಟೆಗಳಿಗೆ ಕೊಂಡೊಯ್ದಿದ್ದಾರೆ. ಬನಾರಸಿ ಸೀರೆ ಮತ್ತಿತರ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ದೊರೆತರೆ ಇಲ್ಲಿನ ನೇಕಾರರ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ'' ಎಂದು ಅವರು ತಿಳಿಸಿದರು.

ರ‍್ಯಾಂಪ್ ವಾಕ್ ಮಾಡಿದ ರಣವೀರ್ ಸಿಂಗ್

ನೇಕಾರರ ಆದಾಯ ಹೆಚ್ಚಾದರೆ ಇಲ್ಲಿನ ನೇಕಾರಿಕೆಗೆ ಹೊಸ ಆಯಾಮ ಸಿಗಲಿದೆ. ನೇಕಾರರು ಬಡತನದ ವಿಷವರ್ತುಲದಿಂದ ಹೊರಬಂದರೆ, ಆಗ ಹೊಸ ಚಿಂತನೆ ಬೆಳೆಯುತ್ತದೆ. ಅದು ಭವಿಷ್ಯದಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಗುರುತಾಗುತ್ತದೆ ಎಂದು ಹೇಳಿದರು.

ಸಂಚಲನ ಮೂಡಿಸಿದ ರಣವೀರ್ ಸಿಂಗ್ ಮತ್ತು ಕೃತಿ ಸನೋನ್ : ಹಿಂದಿ ಚಿತ್ರರಂಗದ ತಾರೆಯರಾದ ರಣವೀರ್ ಸಿಂಗ್ ಮತ್ತು ಕೃತಿ ಸನೋನ್​ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿ ಕಾರ್ಯಕ್ರಮವನ್ನು ರಂಗು ರಂಗೇರಿಸಿದರು. ಬನಾರಸಿ ರೇಷ್ಮೆ ಆಧಾರಿತ ಸೀರೆಗಳು, ಲೆಹೆಂಗಾ - ಚುಂದರಿ, ಸಲ್ವಾರ್-ಕುರ್ತಾ ಧರಿಸಿದ ರೂಪದರ್ಶಿಗಳು ಒಬ್ಬರ ನಂತರ ಒಬ್ಬರಂತೆ ರ‍್ಯಾಂಪ್ ಮೇಲೆ ಕಾಣಿಸಿಕೊಂಡರು. ಅವರು ಬನಾರಸಿ ರೇಷ್ಮೆಯಿಂದ ಮಾಡಿದ ಕುರ್ತಾ ಮತ್ತು ಧೋತಿ ಧರಿಸಿ ರ‍್ಯಾಂಪ್ ಮೇಲೆ ಬಂದರೆ, ಕೃತಿ ಬನಾರಸಿ ಸಲ್ವಾರ್ - ಕುರ್ತಾ ಧರಿಸಿದ್ದರು. ರಣವೀರ್ ಮತ್ತು ಕೃತಿ ರ‍್ಯಾಂಪ್ ಮೇಲೆ ಬಂದ ತಕ್ಷಣ ಜನರು ಆತ್ಮೀಯವಾಗಿ ಸ್ವಾಗತಿಸಿದರು.

ಈ ವೇಳೆ, ಜನರ ನಡುವೆ ಸೇರಿದ ರಣವೀರ್, ''ಕಾಶಿಗೆ ಬಂದ ನಂತರ ಪದಗಳಲ್ಲಿ ಹೇಳಲಾಗದಂತಹ ಅನುಭವವಾಗುತ್ತಿದೆ. ಕಾಶಿಯಲ್ಲಿ ಎಂತಹ ಶಕ್ತಿ ಇದೆ ಎಂಬುದನ್ನು ಇಲ್ಲಿ ಮಾತ್ರ ಅನುಭವಿಸಬಹುದು. ಇಲ್ಲಿನ ನೇಯ್ಗೆಯ ಕಲಾತ್ಮಕತೆಗೆ ಹೋಲಿಕೆಯೇ ಇಲ್ಲ. ಹರ್ ಹರ್ ಮಹಾದೇವ್'' ಎಂದು ಘೋಷಿಸಿದರು.

''ಬನಾರಸಿ ಸೀರೆಯಾಗಲಿ ಅಥವಾ ಇನ್ನಾವುದೇ ಬಟ್ಟೆಯಾಗಲಿ, ಇದು ಹೃದಯದಿಂದ ತಯಾರಿಸಲ್ಪಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರ ಪಾರಂಪರಿಕ ಅಭಿವೃದ್ಧಿ ಅಭಿಯಾನದಲ್ಲಿ ನಾನೂ ಸಹ ಭಾಗಿಯಾಗಿರುವುದು ಅದೃಷ್ಟದ ಸಂಗತಿ'' ಎಂದು ನಟಿ ಕೃತಿ ಸನೋನ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ :ಬೋಟ್ ಸಂಸ್ಥೆಯಲ್ಲಿ ನಟ ರಣವೀರ್ ಸಿಂಗ್​​ ಭಾರೀ ಹೂಡಿಕೆ

Last Updated : Apr 15, 2024, 10:26 AM IST

ABOUT THE AUTHOR

...view details