ಟಾಲಿವುಡ್ ಸೂಪರ್ ಸ್ಟಾರ್ ರಾಮ್ ಚರಣ್ ಮುಖ್ಯಭೂಮಿಕೆಯ ಗೇಮ್ ಚೇಂಜರ್ ಜನವರಿ 10 ರಂದು ಬಹಳ ಅದ್ಧೂರಿಯಾಗಿ ತೆರೆಗಪಗಪ್ಪಳಿಸಿತು. ಎಸ್.ಶಂಕರ್ ನಿರ್ದೇಶನದ ಸಿನಿಮಾ ತನ್ನ ಮೊದಲ ದಿನದಂದು ಅದ್ಭುತ ಅಂಕಿ ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿತು. ಆದ್ರೆ ಎರಡನೇ ದಿನದಿಂದಲೇ ಗಳಿಕೆ ಇಳಿಕೆ ಕಾಣಲು ಶುರುವಾಯಿತು.
ಹೌದು, ಜನವರಿ 10 ರಂದು ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 51 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಪೊಲಿಟಿಕಲ್ ಥ್ರಿಲ್ಲರ್ ತನ್ನ 2ನೇ ದಿನದಿಂದಲೇ ಬಾಕ್ಸ್ ಆಫೀಸ್‌ನಲ್ಲಿ ಕುಸಿತ ಎದುರಿಸುತ್ತಿದೆ. ಬಿಗ್ ಬಜೆಟ್ ಮತ್ತು ಹಬ್ಬದ ಸಂದರ್ಭ ಬಿಡುಗಡೆಯಾಗಿರುವುದರ ಹೊರತಾಗಿಯೂ, ಗೇಮ್ ಚೇಂಜರ್ ಆರಂಭದ ಆ ಸ್ಪೀಡ್ ಕಾಯ್ದುಕೊಳ್ಳಲು ಹೆಣಗಾಡುತ್ತಿದೆ. ಮೊದಲ ವಾರಾಂತ್ಯ ಮತ್ತು ಮೊದಲ ಸೋಮವಾರದಂದು ಗಳಿಕೆಯಲ್ಲಿ ತೀವ್ರ ಇಳಿಕೆಯಾಗಿದ್ದು, ಸಿನಿಮಾ ತನ್ನ ಬಂಡವಾಳವನ್ನೂ ವಾಪಸ್ ಪಡೆಯೋದು ಕಷ್ಟ ಎನ್ನುವಂತಿದೆ ಪರಿಸ್ಥಿತಿ.
ಬಾಕ್ಸ್ ಆಫೀಸ್ ಕಲೆಕ್ಷನ್ ಅಂಕಿ - ಅಂಶ:ಜನವರಿ 10 ರಂದು ಅಂದರೆ ಗೇಮ್ ಚೇಂಜರ್‌ನ ಮೊದಲ ದಿನದ ಕಲೆಕ್ಷನ್ ಎಲ್ಲರ ಹುಬ್ಬೇರಿಸುವಂತಿತ್ತು. ಸೂಪರ್ ಸ್ಟಾರ್ ರಾಮ್ ಚರಣ್ ಮತ್ತು ಖ್ಯಾತ ನಿರ್ದೇಶಕ ಎಸ್. ಶಂಕರ್ ಕಾಂಬಿನೇಶನ್ ಸುತ್ತಲಿನ ಉತ್ಸಾಹ ಬಿಡುಗಡೆಗೂ ಮುನ್ನ ದೊಡ್ಡ ಮಟ್ಟದಲ್ಲೇ ಇತ್ತು. ಅದಾಗ್ಯೂ, 2ನೇ ದಿನ (ಜನವರಿ 11) ದಂದು ಗೇಮ್ ಚೇಂಜರ್ ದೇಶೀಯ ಮಾರುಕಟ್ಟೆಯಲ್ಲಿ 21.6 ಕೋಟಿ ರೂ. ಗಳಿಸಿತು. ಇದು ಶೇ.57.65ರಷ್ಟು ಕುಸಿತವನ್ನು ಸೂಚಿಸಿತ್ತು. 3ನೇ ದಿನ ಅಂದರೆ ಜನವರಿ 12ರಂದೂ ಕೂಡಾ ಇಳಿಕೆಯ ಪ್ರವೃತ್ತಿ ಮುಂದುವರೆದು ಸಿನಿಮಾ 15.9 ಕೋಟಿ ರೂಪಾಯಿ ಗಳಿಸಿತ್ತು. ಶನಿವಾರಕ್ಕೆ ಹೋಲಿಸಿದರೆ ಚಿತ್ರ ಶೇ.26.39ರಷ್ಟು ಕುಸಿತ ಕಂಡಿತ್ತು. ಮೊದಲ ವೀಕೆಂಡ್ನಲ್ಲೂ ಸಿನಿಮಾ ಗಳಿಕೆ ಇಷ್ಟೊಂದು ಮಟ್ಟಿಗೆ ಇಳಿಕೆಯಾಗಿದ್ದು, ಚಿತ್ರತಂಡ ಮತ್ತು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.