ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟಗಳ ರಾಜಕೀಯ ಸಭೆಗಳಿಗೂ ಮುನ್ನ ಸೂಪರ್ ಸ್ಟಾರ್ ರಜನಿಕಾಂತ್ ದೆಹಲಿಗೆ ಭೇಟಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಈ ಭೇಟಿಯನ್ನು ಭಾರತದ ರಾಜಕೀಯ ವಲಯದಲ್ಲಿ ಪ್ರಮುಖ ಕ್ಷಣವೆಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ. ಎರಡೂ ಮೈತ್ರಿ ಒಕ್ಕೂಟಗಳು ರಾಷ್ಟ್ರ ರಾಜಧಾನಿಯಲ್ಲಿ ನಿರ್ಣಾಯಕ ಸಭೆಗೆ ಸಜ್ಜಾಗಿವೆ. ಇದರ ನಡುವೆ ಹೆಸರಾಂತ ನಟ ಕೂಡ ದೆಹಲಿಯಲ್ಲಿದ್ದಾರೆ. ಈ ಬಗ್ಗೆ ಹಲವು ಊಹಾಪೋಹಗಳು ಎದ್ದಿರೋದೊಂತು ನಿಜ. ಆದ್ರೆ ರಜನಿಕಾಂತ್ ಅವರ ಈ ಭೇಟಿಯು, ಸಿನಿಮಾ ಮೇಲಿನ ಅವರ ನಿರಂತರ ಬದ್ಧತೆಯನ್ನು ಗಮನಿಸಿದರೆ ಅವರ ಕೆಲಸಕ್ಕೆ ಸಂಬಂಧಿಸಿದಂತೆ ಇರಬಹುದು ಎಂದು ತೋರುತ್ತಿದೆ.
2024ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ, ಎನ್‌ಡಿಎ ಮತ್ತು ಇಂಡಿಯಾ ಎರಡೂ ಒಕ್ಕೂಟಗಳು ತಮ್ಮ ಮುಂದಿನ ಹೆಜ್ಜೆಗಾಗಿ ತಮ್ಮ ಉನ್ನತ ನಾಯಕರು ಹಾಗೂ ಮಿತ್ರಪಕ್ಷಗಳೊಂದಿಗೆ ಸಭೆಗಳನ್ನು ಕರೆದಿವೆ. ಬಿಜೆಪಿ ಬಹುಮತ ಸಾಧಿಸಲು ವಿಫಲವಾದ ಕಾರಣ ಸರ್ಕಾರ ರಚಿಸಲು ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುಬೇಕಿದೆ.
ವಿರೋಧ ಪಕ್ಷದ ಮೈತ್ರಿಕೂಟವು ಬಿಜೆಪಿಯ ಕೆಲ ಮಿತ್ರಪಕ್ಷಗಳಿಂದ ಬೆಂಬಲ ಪಡೆದರೆ ಸ್ವತಂತ್ರವಾಗಿ ಸರ್ಕಾರ ರಚಿಸುವ ಸಾಧ್ಯತೆಯೂ ಇದೆ. ಬಿಜೆಪಿ ಸರಳ ಬಹುಮತಕ್ಕೆ ಬೇಕಾಗಿರುವ ಸ್ಥಾನಗಳನ್ನು ಕಳೆದುಕೊಂಡಿರುವ ಹಿನ್ನೆಲೆ, ಸಮ್ಮಿಶ್ರ ಸರ್ಕಾರ ರಚನೆಗಾಗಿ ನಿತೀಶ್ ಕುಮಾರ್, ಎನ್. ಚಂದ್ರಬಾಬು ನಾಯ್ಡು ಮತ್ತು ಏಕನಾಥ್ ಶಿಂಧೆ ಅವರಂತಹ ಮಿತ್ರಪಕ್ಷಗಳನ್ನು ಅವಲಂಬಿಸಿದೆ.
ಇನ್ನು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಸಂಪಾದಿಸಿರುವ ರಜನಿಕಾಂತ್, ಯಾವುದೇ ಪ್ರಮುಖ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ, ಈ ಹಿಂದೆ ರಾಜಕೀಯಕ್ಕೆ ಕಾಲಿಟ್ಟಿದ್ದರು. ಸದ್ಯ ಅವರ ದೆಹಲಿ ಭೇಟಿ ಮೈತ್ರಿ ಬಗ್ಗೆ ಸಾಕಷ್ಟು ಊಹಾಪೋಹಗಳನ್ನು ಹುಟ್ಟುಹಾಕಿದೆ.