ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸದ್ಯ ತಮ್ಮ 'ಕಲ್ಕಿ 2898 ಎಡಿ' ಸಿನಿಮಾದ ಯಶಸ್ಸಿನಲೆಯಲ್ಲಿ ತೇಲುತ್ತಿದ್ದಾರೆ. ಕಳೆದ ವರ್ಷಾಂತ್ಯ ಸಲಾರ್ ಸೂಪರ್ ಹಿಟ್ ಆಗಿದ್ದು, ಇತ್ತೀಚೆಗೆ ಬಿಡುಗಡೆ ಆದ ಕಲ್ಕಿ ಕೂಡ ನಿರೀಕ್ಷೆಯಂತೆ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಪ್ರಭಾಸ್ ಅವರ ಬಾಕ್ಸ್ ಆಫೀಸ್ ವಿಜಯದ ಪಯಣ ಮುಂದುವರಿದಿದ್ದು, ಸೂಪರ್ ಸ್ಟಾರ್ನ ಮುಂದಿನ ಬಹುನಿರೀಕ್ಷಿತ ಚಿತ್ರ 'ದಿ ರಾಜಾ ಸಾಬ್'ಗೆ ಸಂಬಂಧಿಸಿದ ಅಪ್ಡೇಟ್ ಬಹಿರಂಗಗೊಂಡಿದೆ. ನಿರ್ದೇಶಕ ಮಾರುತಿ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಸಂಬಂಧಿಸಿದ ಪೋಸ್ಟ್ ಶೇರ್ ಆಗುತ್ತಿದ್ದಂತೆ ಅಭಿಮಾನಿ ಬಳಗದಲ್ಲಿ ಸಾಕಷ್ಟು ಕುತೂಹಲ ಮೂಡಿದೆ.
ರೊಮ್ಯಾಂಟಿಕ್-ಹಾರರ್ ಸಿನಿಮಾ ಬಗ್ಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದು, ಇಂದು ಪೋಸ್ಟರ್ ಅನಾವರಣಗೊಳಿಸಲಾಗಿದೆ. ಚಿತ್ರದ ಬಹುನಿರೀಕ್ಷಿತ ಗ್ಲಿಂಪ್ಸ್ ನಾಳೆ, ಜುಲೈ 29ರಂದು ಬಹಿರಂಗಗೊಳ್ಳಲಿದೆ ಎಂದು ಚಿತ್ರತಯಾರಕರಿಂದು ಖಚಿತಪಡಿಸಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡಿರುವ ನಿರ್ಮಾಪಕರು, "ವರೇ ವರೇ ವರೇ ವಚೇಸದು ರಾಜಾ ಸಾಬ್. ನಾವೆಲ್ಲರೂ ಪ್ರೀತಿಸುವ ಡಾರ್ಲಿಂಗ್ ಕಮಿಂಗ್ ಬ್ಯಾಕ್. ಇನ್ಕಾ ಶೇಕ್ ಐ. ನಾಳೆ ಸಂಜೆ 5:03ಕ್ಕೆ ದಿ ರಾಜಾ ಸಾಬ್ ಫ್ಯಾನ್ ಇಂಡಿಯಾ ಗ್ಲಿಂಪ್ಸ್ ಅನಾವರಣಗೊಳ್ಳಲಿದೆ'' ಎಂದು ಬರೆದುಕೊಂಡಿದ್ದಾರೆ.
ಇಂದು ಚಿತ್ರತಂಡ ಅನಾವರಣಗೊಳಿಸಿರುವ ಪೋಸ್ಟರ್‌ನಲ್ಲಿ ನಾಯಕ ನಟ ಪ್ರಭಾಸ್ ಸೂಟ್‌ನಲ್ಲಿ ಸೊಗಸಾಗಿ ಕಾಣಿಸಿಕೊಂಡಿದ್ದಾರೆ. ನಾಳೆ ಸಂಜೆ ಚಿತ್ರದ ಬಹು ನಿರೀಕ್ಷಿತ ಮೊದಲ ಗ್ಲಿಂಪ್ಸ್ ಬರಲಿದೆ. ವರದಿಗಳ ಪ್ರಕಾರ, ಶೇ.40ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಆಗಸ್ಟ್ 2ರಿಂದ ಮುಂದಿನ ಹಂತದ ಚಿತ್ರಿಕರಣ ಪ್ರಾರಂಭವಾಗಲಿದೆ.