ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ ಸಿನಿಮಾ 'ಪೌಡರ್' ಬಿಡುಗಡೆಗೆ ಎದುರು ನೋಡುತ್ತಿದೆ. ಆಗಸ್ಟ್ 23ಕ್ಕೆ ತೆರೆಕಾಣಲಿರುವ ಸಿನಿಮಾ ವಿಭಿನ್ನವಾಗಿ ಪ್ರಚಾರ ಮಾಡುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶ ಕಂಡಿದೆ. ಅದರಂತೆ ಇಂದು ಚಿತ್ರತಂಡ ಶೇರ್ ಮಾಡಿರುವ ಸೋಷಿಯಲ್ ಮೀಡಿಯಾ ಪೋಸ್ಟ್, ಚಿತ್ರದ ಪೋಸ್ಟರ್ ನೆಟ್ಟಿಗರ ಗಮನ ಸೆಳೆದಿದೆ.
ಕೆಆರ್ಜಿ ಸ್ಟುಡಿಯೋಸ್ ಪೋಸ್ಟ್: ಪೋಸ್ಟರ್ ಒಂದನ್ನು ಶೇರ್ ಮಾಡಿದ 'ಪೌಡರ್' ಹಿಂದಿರುವ ಜನಪ್ರಿಯ ಚಲನಚಿತ್ರ ನಿರ್ಮಾಣ ಸಂಸ್ಥೆ ಕೆಆರ್ಜಿ ಸ್ಟುಡಿಯೋಸ್, ''ಹೇ ಪೌಡರೀ ಸ್ನೇಹಿತರೇ, ಪೌಡರ್ ಟ್ರೈಬ್ಗೆ ಸೇರಲು ಬನ್ನಿ, ವೈಬ್ ಮಾಡಿ. ಉತ್ಸಾಹಭರಿತ ಪಾರ್ಟಿಯಲ್ಲಿ ಭಾಗಿಯಾಗಿ'' ಎಂದು ಬರೆದುಕೊಂಡಿದೆ. ಪೌಡರ್ ಕನ್ನಡ ಸಿನಿಮಾ ಆಗಸ್ಟ್ 23ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎಂದು ಪೋಸ್ಟ್ನ ಕ್ಯಾಪ್ಷನ್ನಲ್ಲಿ ಬರೆಯಲಾಗಿದೆ.
ಕಲರ್ಫುಲ್ ಪೋಸ್ಟರ್ನಲ್ಲಿ ಚಿತ್ರತಂಡದವರ ಉತ್ಸಾಹಭರಿತ ಫೋಟೋಗಳಿವೆ. ''ಪೌಡರ್ ಪಾರ್ಟಿ'' ಎಂದು ಶೀರ್ಷಿಕೆಯಲ್ಲಿ ಹೇಳಲಾಗಿದೆ. ಜೊತೆಗೆ, ಪೌಡರ್ ಸ್ಟಾರ್ಸ್ ಅಂಡ್ ರೋಸ್ಟಿಂಗ್ ಸ್ಟಾರ್ಸ್, ಆಗಸ್ಟ್ 1, 6ಪಿಎಂ, 1522 ಜೆಪಿ ನಗರ್ ಎಂದು ಸಂದೇಶ ನೀಡಲಾಗಿದೆ.
ದಿಗಂತ್ ಪೋಸ್ಟ್: ನಾಯಕ ನಟ ದಿಗಂತ್ ಮಂಚಾಲೆ ಕೂಡಾ ಪೋಸ್ಟ್ ಶೇರ್ ಮಾಡಿದ್ದು, ಪೌಡರ್ ಪಾರ್ಟಿ ಆಗಸ್ಟ್ 1ರಂದು ನಡೆಯಲಿದೆ. ಬಂದು ಪಾರ್ಟಿಗೆ ಸೇರಿಕೊಳ್ಳಿ, ವೈಬ್ ಮಾಡಿ ಎಂದು ಬರೆದುಕೊಂಡಿದ್ದಾರೆ.
ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಾ ಜನಪ್ರಿಯರಾಗಿರುವ ದೂದ್ ಪೇಡಾ ಖ್ಯಾತಿಯ ದಿಗಂತ್ ಮಂಚಾಲೆ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ನಿನ್ನ ಸನಿಹಕೆ, ಹೈಡ್ ಆ್ಯಂಡ್ ಸೀಕ್ ಸಿನಿಮಾಗಳ ಮೂಲಕ ಚಿತ್ರರಂಗ ಮತ್ತು ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿರುವ ಧನ್ಯಾ ರಾಮ್ಕುಮಾರ್, ದಿಗಂತ್ಗೆ ಜೋಡಿಯಾಗಿದ್ದಾರೆ. ಇದೊಂದು ಕಾಮಿಡಿ ಸಿನಿಮಾವಾಗಿದ್ದು, ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ಉಣಬಡಿಸಲು ಸಜ್ಜಾಗಿದೆ.