ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ. ನಿನ್ನೆಯಷ್ಟೇ ಅನುಷಾ ಅವರು ಎಲಿಮಿನೇಟ್ ಆಗಿ ಹೊರ ನಡೆದಿದ್ದಾರೆ. ಎಂಟನೇ ವಾರದ ಮೊದಲ ದಿನವೇ ನಾಮಿನೇಷನ್ ಕಾವು ಜೋರಾಗಿದೆ. ಎಲಿಮಿನೇಷನ್ನ ನಾಮಿನೇಷನ್ ಗದ್ದಲದಲ್ಲಿ ಮನೆಮಂದಿಯ ಮನಸ್ಸು ಕದಲಿದೆ. ಸ್ನೇಹ ಮುರಿದುಬಿದ್ದಿದೆ. ಒಳಗಿನ ಕಿಚ್ಚು ಹೊರ ಬಂದಿದೆ. ಮುಂದೇನಾಗಬಹುದು ಎಂಬ ಕುತೂಹಲದಲ್ಲಿ ಕನ್ನಡಿಗರಿದ್ದಾರೆ.
''ನಾಮಿನೇಷನ್ನಲ್ಲಿ ಒಡೆಯಿತಾ ಸದಸ್ಯರ ಒಗ್ಗಟ್ಟು?'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಎಂಬ ಕ್ಯಾಪ್ಷನ್ನೊಂದಿಗೆ ಬಿಗ್ ಬಾಸ್ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದೆ.
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಶೋಭಾ ಶೆಟ್ಟಿ ಮತ್ತು ರಜತ್ ಎಂಟ್ರಿ ಕೊಟ್ಟಿದ್ದಾರೆ. ಮನೆಗೆ ಅವರ ಎಂಟ್ರಿ ಬಹಳ ಅದ್ಧೂರಿಯಾಗೇ ನಡೆದಿದೆ. ಮನೆಗೆ ಬರುತ್ತಿದ್ದಂತೆ ತಮ್ಮ ನೇರನುಡಿಗಳಿಗೆ ಸ್ಪರ್ಧಿಗಳಿಗೆ ಶಾಕ್ ಕೊಟ್ಟಿದ್ದಾರೆ. ಇದರ ನಡುವೆಯೇ ಬಂದ ನಾಮಿನೇಷನ್ ಪ್ರೊಸೆಸ್ ಮನೆಯ ಕಾವನ್ನು ಮತ್ತಷ್ಟು ಹೆಚ್ಚಿಸಿದೆ. ಮನದೊಳಗೆ ಅದುಮಿಟ್ಟುಕೊಂಡಿದ್ದ ಆಕ್ರೋಶ ಈಗ ಬಹಿರಂಗವಾಗೇ ವ್ಯಕ್ತವಾಗಿದೆ.
ಮಡಿಕೆ ಒಡೆದು ನಾಮನೇಷನ್ ಹೆಸರು ಸೂಚಿಸುವಂತೆ ಸ್ಪರ್ಧಿಗಳಿಗೆ ಬಿಗ್ ಬಾಸ್ ಸೂಚಿಸಿದ್ದಾರೆ. ಅದರಂತೆ ಮಂಜಣ್ಣನ ಕೆಲ ಮಾತುಗಳು ನನ್ನನ್ನು ಕುಗ್ಗಿಸಿವೆ ಎಂದು ಮೋಕ್ಷಿತಾ ತಿಳಿಸಿದ್ದಾರೆ. ಇದು ಮಂಜು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಈವರೆಗೆ ಮಂಜು, ಗೌತಮಿ, ಮೋಕ್ಷಿತಾ ಆಪ್ತ ಸ್ನೇಹಿತರಾಗಿ ಗುರುತಿಸಿಕೊಂಡಿದ್ದರು. ಆದರೆ ಕಳೆದ ವಾರವಷ್ಟೇ ನಾನೆಲ್ಲೋ ಸೈಡ್ಲೈನ್ ಆಗುತ್ತಿದ್ದೇನೋ ಎಂಬ ಭಾವನೆಯನ್ನು ಮೋಕ್ಷಿತಾ ಮನೆಯ ಇತರ ಸ್ಪರ್ಧಿಗಳೊಂದಿಗೆ ಹಂಚಿಕೊಂಡಿದ್ದರು. ಇದೀಗ ಮನದೊಳಗಿನ ಅಸಮಾಧಾನ ಎಲ್ಲರೆದುರು ಬಹಿರಂಗವಾಗಿದೆ.