ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಅಭಿನೇತ್ರಿ ರಶ್ಮಿಕಾ ಮಂದಣ್ಣ ಸದ್ಯ ಸ್ಟಾರ್ ನಟ ಧನುಷ್ ಜೊತೆ 'ಕುಬೇರ' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಿನಿಮಾದ ಸಣ್ಣ ಅಪ್ಡೇಟ್ಸ್, ಸುಂದರ ಫೋಟೋಗಳನ್ನು ಹಂಚಿಕೊಳ್ಳಲು ಹೆಸರುವಾಸಿಯಾಗಿರುವ ಕಿರಿಕ್ ಪಾರ್ಟಿ ಬೆಡಗಿ ಇದೀಗ ತಮ್ಮ ಮುಂದಿನ ಚಿತ್ರಕ್ಕಾಗಿನ ತಮ್ಮ ಶ್ರಮವನ್ನು ಹಂಚಿಕೊಂಡಿದ್ದಾರೆ. ಫಿದಾ ಮತ್ತು ಲವ್ ಸ್ಟೋರಿಯಂತಹ ಚಿತ್ರಗಳಿಗೆ ಹೆಸರುವಾಸಿಯಾಗಿರುವ ಶೇಖರ್ ಕಮ್ಮುಲ ನಿರ್ದೇಶನದಲ್ಲಿ ಈ 'ಕುಬೇರ' ಚಿತ್ರ ಮೂಡಿಬರುತ್ತಿದ್ದು, ಚಿತ್ರೀಕರಣದ ಸಮಯದಲ್ಲಿನ ತಮ್ಮ ನೈಟ್ ಶಿಫ್ಟ್ ಅಪ್ಡೇಟ್ಸ್ ಹಂಚಿಕೊಂಡಿದ್ದಾರೆ.
ರಶ್ಮಿಕಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರಿಸ್ ವಿಭಾಗದಲ್ಲಿ ಶಾರ್ಟ್ ಜಿಮ್ ವಿಡಿಯೋ ಹಂಚಿಕೊಂಡಿದ್ದಾರೆ. ಜೊತೆಗೆ ನೈಟ್ ಶಿಫ್ಟ್ ಕೆಲಸಗಳನ್ನು ಉಲ್ಲೇಖಿಸಿದ್ದಾರೆ. ಅಲ್ಲದೇ ತಮ್ಮ ವೇಳಾಪಟ್ಟಿಯನ್ನು ಬಹಿರಂಗಪಡಿಸಿದರು. ಬೆಳಗ್ಗೆ 8 ಗಂಟೆಗೆ 'ಕುಬೇರ' ಚಿತ್ರೀಕರಣದಿಂದ ಹಿಂತಿರುಗಿ, ಆಹಾರ ಸೇವಿಸಿ, ಮಧ್ಯಾಹ್ನ ಸ್ವಲ್ಪ ನಿದ್ರೆ ಮಾಡುವ ಮೊದಲು ಪುಸ್ತಕ ಓದಿದೆ. ಸಂಜೆ 6 ಗಂಟೆಗೆ ಎಚ್ಚರಗೊಂಡೆ. ಕಾರ್ಡಿಯೋ ವ್ಯಾಯಾಮ ಮಾಡುವ ಯೋಚನೆ ಬಂದರೂ, ಅದಕ್ಕೆ ಮನಸ್ಸಾಗಲಿಲ್ಲ. ಅಂತಿಮವಾಗಿ 1 ಗಂಟೆಯ ಸುಮಾರಿಗೆ ವೇಟ್ ಲಿಫ್ಟಿಂಗ್ ಮಾಡಲು ನಿರ್ಧರಿಸಿದೆ ಎಂಬುದನ್ನು ವಿಡಿಯೋ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ನಟಿ 100 ಕೆ.ಜಿ ವೇಟ್ ಲಿಫ್ಟಿಂಗ್ ಮಾಡಿರೋದನ್ನು ಕಾಣಬಹುದು.
'ಕುಬೇರ' ಚಿತ್ರೀಕರಣದ ಅನುಭವ ಹಂಚಿಕೊಳ್ಳುತ್ತಾ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಧನುಷ್, ಶೇಖರ್ ಸೇರಿದಂತೆ ಚಿತ್ರತಂಡದವರೊಂದಿಗಿನ ಒಡನಾಟದ ಬಗ್ಗೆಯೂ ಮಾತನಾಡಿದ್ದಾರೆ. "ಧನುಷ್ ಸರ್, ಶೇಖರ್ ಸರ್, ನಿಕೇತ್ ಮತ್ತು ಕುಬೇರ ತಂಡದೊಂದಿಗೆ ಶೂಟಿಂಗ್ ಮಾಡುವುದು ತುಂಬಾ ಖುಷಿ ಕೊಟ್ಟಿದೆ" ಎಂದು ನಟಿ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.