ಭಾರತದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್ಗಳಲ್ಲಿ ಒಂದಾಗಿರುವ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ 'ಕೆರೆಬೇಟೆ' ಮತ್ತು 'ವೆಂಕ್ಯಾ' ಸಿನಿಮಾಗಳು ಪ್ರದರ್ಶನವಾಗಲಿದೆ.
55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ) ನವೆಂಬರ್ 20ರಿಂದ 28ರವರೆಗೆ ಗೋವಾದ ಪಣಜಿಯಲ್ಲಿ ನಡೆಯಲಿದೆ. ಇಲ್ಲಿ ಭಾರತೀಯ ಚಿತ್ರರಂಗದ ವೈವಿಧ್ಯತೆ ಪ್ರದರ್ಶನಗೊಳ್ಳಲಿದೆ.
ಬಾಲಿವುಡ್ನ 'ಸ್ವಾತಂತ್ರ್ಯ ವೀರ್ ಸಾವರ್ಕರ್' ಸಿನಿಮಾ ಮೊದಲು ಪ್ರದರ್ಶನಗೊಳ್ಳಲಿದೆ. ರಣ್ದೀಪ್ ಹೂಡಾ ನಿರ್ದೇಶಿಸಿ, ನಟಿಸಿರುವ ಸ್ವಾತಂತ್ರ್ಯ ವೀರ್ ಸಾವರ್ಕರ್ ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಮಾರ್ಚ್‌ನಲ್ಲಿ ಬಿಡುಗಡೆಯಾಗಿತ್ತು. ಚಿತ್ರ ಸ್ವಾತಂತ್ರ್ಯ ಹೋರಾಟಗಾರನ ಜೀವನಚರಿತ್ರೆಯನ್ನು ಹೊಂದಿದೆ.
ಇಂಡಿಯನ್ ಪನೋರಮಾ ವಿಭಾಗದಲ್ಲಿ 25 ಫೀಚರ್ ಫಿಲ್ಮ್ಸ್ ಪ್ರದರ್ಶನಗೊಳ್ಳಲಿದೆ. ಎಂಟ್ರಿಯಾದ 384 ಚಿತ್ರಗಳ ಪೈಕಿ 25 ಸಿನಿಮಾಗಳು ಆಯ್ಕೆ ಆಗಿವೆ. ಈ ಪೈಕಿ ಕೆರೆಬೇಟೆ (ಕನ್ನಡ), ವೆಂಕ್ಯಾ (ಕನ್ನಡ), ಓಂಕೋ ಕಿ ಕೋಥಿನ್ (ಬಂಗಾಳಿ), ಕರ್ಕೆನ್ (ಗಾರೋ), ಆರ್ಟಿಕಲ್ 370 (ಹಿಂದಿ), ಶ್ರೀಕಾಂತ್ (ಹಿಂದಿ), ಆಡುಜೀವಿತಂ (ಮಲಯಾಳಂ), ರಾವ್ಸಾಹೇಬ್ (ಮರಾಠಿ), ಜಿಗರ್ತಂಡ ಡಬಲ್ ಎಕ್ಸ್ (ತಮಿಳು) ಮತ್ತು 35 ಚಿನ್ನ ಕಥಾ ಕಾದು (ತೆಲುಗು) ಚಿತ್ರಗಳು ಸೇರಿ ಹಲವು ಇವೆ. ಕಾರ್ಖಾನು (ಗುಜರಾತಿ), 12th ಫೇಲ್ (ಹಿಂದಿ), ಮಂಜುಮ್ಮೆಲ್ ಬಾಯ್ಸ್ (ಮಲಯಾಳಂ), ಸ್ವರ್ಗರತ್ (ಅಸ್ಸಾಮಿ) ಮತ್ತು ಕಲ್ಕಿ 2898 ಎಡಿ (ತೆಲುಗು)ನಂತಹ ಐದು ಮೈನ್ಸ್ಟ್ರೀಮ್ ಸಿನಿಮಾಗಳಿವೆ.
ಫೀಚರ್ ಫಿಲ್ಮ್ ಜೊತೆ ಜೊತೆಗೆ, 20 ನಾನ್ ಫೀಚರ್ ಸಿನಿಮಾಗಳು ಸಹ ಪ್ರದರ್ಶನಗೊಳ್ಳಲಿವೆ. ಲಡಾಖಿ ಭಾಷೆಯ ಘರ್ ಜೈಸಾ ಕುಚ್ ಚಿತ್ರ ಮೊದಲು ಪ್ರದರ್ಶನಗೊಳ್ಳಲಿದೆ. ಈ ಆಯ್ಕೆ ಪ್ರಕ್ರಿಯೆಯು ಚಿತ್ರರಂಗದ ಹೆಸರಾಂತ ವ್ಯಕ್ತಿಗಳನ್ನು ಒಳಗೊಂಡಿತ್ತು. ಸಿನಿಮಾಗಳ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಶ್ರೀಮಂತಿಕೆಯನ್ನು ಪ್ರತಿನಿಧಿಸುವ ಪ್ರಯತ್ನವಿದು. ಇಂಡಿಯನ್ ಫಿಲ್ಮ್ಮೇಕರ್ಗಳ ಕಲಾತ್ಮಕ ಅಭಿವ್ಯಕ್ತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ 'ಇಂಡಿಯನ್ ಪನೋರಮಾ'ವು 1978ರಲ್ಲಿ ಪ್ರಾರಂಭವಾದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅವಿಭಾಜ್ಯ ಅಂಗವಾಗಿದೆ.
ಇನ್ನೂ ಕನ್ನಡದ ಸಿನಿಮಾಗಳನ್ನು ಗಮನಿಸುವುದಾದ್ರೆ, ಗೌರಿಶಂಕರ್ ಮುಖ್ಯಭೂಮಿಕೆಯ ಮತ್ತು ರಾಜ್ ಗುರು ನಿರ್ದೇಶನದ 'ಕೆರೆಬೇಟೆ' ಸಿನಿಮಾ ಮಾರ್ಚ್ ತಿಂಗಳಲ್ಲಿ ತೆರೆಕಂಡು ಯಶಸ್ವಿಯಾಗಿತ್ತು. ಕಮರ್ಷಿಯಲಿ ದೊಡ್ಡ ಮಟ್ಟದಲ್ಲಿ ಯಶ ಕಾಣದಿದ್ದರೂ ಕೂಡಾ ಜನಮನ ಗೆದ್ದಿರುವುದು ತಂಡದ ಶ್ರಮಕ್ಕೆ ಸಿಕ್ಕ ಫಲ ಎಂದು ಚಿತ್ರತಂಡ ಹೇಳಿಕೊಂಡಿತ್ತು.