'ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ' ಹಾಗೂ 'ಹೊಂದಿಸಿ ಬರೆಯಿರಿ' ಚಿತ್ರಗಳಿಂದ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡಿರುವ ನಟ ಪ್ರವೀಣ್ ತೇಜ್. ಇದೀಗ 'ಜಂಬೂ ಸರ್ಕಸ್' ಚಿತ್ರದ ಬಿಡುಗಡೆ ಖುಷಿಯಲ್ಲಿರುವ ಇವರು ಅಫೀಶಿಯಲ್ ಟ್ರೇಲರ್ ಅನಾವರಣಗೊಳಿಸಿದ್ದಾರೆ. 'ಫ್ರೆಂಡ್ಸ್', 'ಜಾಲಿ ಡೇಸ್', 'ಕೃಷ್ಣ', 'ಬುಲ್ ಬುಲ್'ನಂತಹ ಹಿಟ್ ಚಿತ್ರಗಳ ನಿರ್ದೇಶಕ ಎಂ.ಡಿ.ಶ್ರೀಧರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಸ್ನೇಹ ಹಾಗೂ ಪ್ರೀತಿಯ ಸುತ್ತ ನಡೆಯುವ ಕಥಾಹಂದರ ಒಳಗೊಂಡ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಬಳಿಕ ಚಿತ್ರತಂಡದವರು ಈ ಚಿತ್ರದ ಅನುಭವ ಹಂಚಿಕೊಂಡರು.
ಮೊದಲು ಮಾತನಾಡಿದ ನಿರ್ದೇಶಕ ಎಂ.ಡಿ.ಶ್ರೀಧರ್, "ಆತ್ಮೀಯ ಗೆಳೆಯರಿಬ್ಬರು ಒಂದೇ ಶಾಲೆ, ಕಾಲೇಜ್‌ನಲ್ಲಿ ಓದಿ, ಒಂದೇ ಮಂಟಪದಲ್ಲಿ, ಒಂದೇ ದಿನ ಮದುವೆಯಾಗಿ, ಒಂದೇ ಏರಿಯಾದಲ್ಲಿ ಮನೆ ಮಾಡುತ್ತಾರೆ. ಇವರ ಗೆಳೆತನ ಇಷ್ಟವಿರದ ಹೆಂಡತಿಯರು ಮಕ್ಕಳನ್ನು ವೈರಿಗಳಂತೆ ಬೆಳೆಸುತ್ತಾರೆ. ಸದಾ ಕಚ್ಚಾಡುತ್ತಲೇ ಬೆಳೆದ ನಾಯಕ-ನಾಯಕಿ ಇಬ್ಬರ ನಡುವೆ ಪ್ರೀತಿ ಹೇಗೆ ಹುಟ್ಟುತ್ತದೆ ಎಂಬುದನ್ನು ಚಿತ್ರದಲ್ಲಿ ಕಾಮಿಡಿಯಾಗಿ ಹೇಳಿದ್ದೇವೆ. ಚಿತ್ರವೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇದೇ ತಿಂಗಳ ಮೂರನೇ ವಾರ ಅಥವಾ ಕೊನೆವಾರ ಬಿಡುಗಡೆ ಮಾಡುವ ಯೋಜನೆಯಿದೆ. ಕವಿರಾಜ್ ಬರೆದಿರುವ 2 ಹಾಡುಗಳಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಚೆಲ್ಲಾಟ ಚಿತ್ರದಿಂದಲೂ ಅವರು ನಮ್ಮ ಜೊತೆ ಇದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ" ಎಂದರು.
ನಂತರ ನಟಿ ಅಂಜಲಿ ಅನೀಶ್ ಮಾತನಾಡಿ, "ಸಿನಿಮಾ ಪ್ಯಾಷನ್ನಿಂದ ಎಂಜಾಯ್ ಮಾಡಿಕೊಂಡು ಸಿನಿಮಾ ಮಾಡಿದ್ದೇವೆ. ಚಿತ್ರದಲ್ಲಿ ನನ್ನದು ಬಜಾರಿ ಥರದ ಪಾತ್ರ. ಜಾಸ್ತಿ ಜಗಳ ಮಾಡ್ತಾಳೆ. ಅವಳಮ್ಮನೇ ಆಕೆಗೆ ಜಗಳ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಅಷ್ಟೇ ಒಳ್ಳೆಯ ಹುಡುಗಿ ಕೂಡ, ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ" ಎಂದು ತಿಳಿಸಿದರು.
ಸಾಹಿತಿ ಕವಿರಾಜ್ ಮಾತನಾಡಿ, "ಈಗ ಕನ್ನಡ ಪ್ರೇಕ್ಷಕ ಒಳ್ಳೆಯ ಸಂದೇಶ ನೀಡಿದ್ದಾರೆ. ಮನರಂಜನೆ ಇದ್ದರೆ ಖಂಡಿತ ಸಿನಿಮಾ ಗೆಲ್ಲುತ್ತೆ. ಶ್ರೀಧರ್ ಅವರಲ್ಲಿ ಬೇರೆಯದೇ ರೀತಿ ಕಾಮಿಡಿ ಸೆನ್ಸ್ ಇದೆ. ಪ್ರವೀಣ್ ತೇಜ್ಗೆ ಭರವಸೆಯ ನಾಯಕನಾಗುವ ಎಲ್ಲಾ ಲಕ್ಷಣಗಳಿವೆ. ನಿರ್ಮಾಪಕರೂ ತೀರ್ಥಹಳ್ಳಿ ಕಡೆಯವರು. ಎಲ್ಲರೂ ಪ್ರೀತಿಯಿಂದ ಸಿನಿಮಾ ಮಾಡಿದ್ದೇವೆ. ಸಿನಿಮಾ ಹಿಟ್ ಆಗಬೇಕು" ಎಂದರು.