ಹೈದರಾಬಾದ್: ಜೂನಿಯರ್ ಎನ್ಟಿಆರ್ ಅಭಿನಯದ ಆ್ಯಕ್ಷನ್ ಡ್ರಾಮಾ 'ದೇವರ' ಬಿಡುಗಡೆಯಾದಾಗಿನಿಂದಲೂ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿದೆ. ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಅಂಕಿ - ಅಂಶಗಳೊಂದಿಗೆ ಪ್ರಯಾಣ ಆರಂಭಿಸಿದ ಚಿತ್ರ ಮೊದಲ ವಾರಾಂತ್ಯಕ್ಕೆ ವಿಶ್ವಾದ್ಯಂತ ಬರೋಬ್ಬರಿ 300 ಕೋಟಿ ರೂ. ಕಲೆಕ್ಷನ್ ಮಾಡಿದೆ. ಆದ್ರೆ ಮೊದಲ ಸೋಮವಾರ ಕಲೆಕ್ಷನ್ ವಿಚಾರದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ.
ಸಿನಿಮಾ ತೆರೆಗಪ್ಪಳಿಸಿದ ದಿನ ಭಾರತದಲ್ 82.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಅದಾಗ್ಯೂ, ಚಿತ್ರ ತನ್ನ ಎರಡನೇ ದಿನ ಶೇ.53.7ರಷ್ಟು ಕುಸಿತ ಕಂಡು, 38.2 ಕೋಟಿ ರು. ಗಳಿಸಿತು. ಮೂರನೇ ದಿನ ಅಂಕಿ ಅಂಶದಲ್ಲಿ ಕೊಂಚ ಏರಿಕೆಯಾಗಿ, 39.9 ಕೋಟಿ ರೂ. ಸಂಪಾದಿಸಿತು. ಅದಾಗ್ಯೂ ಸೋಮವಾರದ ಹೊತ್ತಿಗೆ ಬಾಕ್ಸ್ ಆಫೀಸ್ ವ್ಯವಹಾರದಲ್ಲಿ ಶೇ.68.67ರಷ್ಟು ಕುಸಿತ ಕಂಡಿದೆ. ಹೌದು, ದೇವರ ತನ್ನ ಮೊದಲ ಸೋಮವಾರ 12.5 ಕೋಟಿ ರೂಪಾಯಿಗಳನ್ನು ಸಂಪಾದಿಸಿದೆ. ಈ ಮೂಲಕ ಭಾರತದಲ್ಲಿ ಬಹುನಿರೀಕ್ಷಿತ ಚಿತ್ರದ ಒಟ್ಟು ಕಲೆಕ್ಷನ್ 173.1 ಕೋಟಿ ರೂಪಾಯಿ.
ಸಿನಿಮಾ ತನ್ನ ತೆಲುಗು ವರ್ಷನ್ನಿಂದ 136.5 ಕೋಟಿ ರೂಪಾಯಿ ಸಂಪಾದಿಸುವ ಮೂಲಕ ಮುನ್ನಡೆ ಸಾಧಿಸಿದೆ. ಹಿಂದಿ ಆವೃತ್ತಿಯಿಂದ 31 ಕೋಟಿ ರೂ. ಬಂದಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ತಮಿಳು ಆವೃತ್ತಿಯಿಂದ 3.45 ಕೋಟಿ ರೂಪಾಯಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಿಂದ ಕ್ರಮವಾಗಿ 1.15 ಕೋಟಿ ರೂ. ಮತ್ತು 1 ಕೋಟಿ ರೂ. ಸಂಪಾದಿಸಿದೆ.
ಹಿಂದಿ ಆವೃತ್ತಿಯ ಯಶಸ್ಸು ಜೂನಿಯರ್ ಎನ್ಟಿಆರ್ ಅವರ ಜನಪ್ರಿಯತೆಗೆ ಹಿಡಿದ ಕೈಗನ್ನಡಿ. ಸಿನಿಮಾ ಮತ್ತು ನಟನೆಗೆ ಭಾಷೆಯ ಹಂಗಿಲ್ಲ, ಗಡಿ ಮೀರಿ ಪ್ರೇಕ್ಷಕರನ್ನು ಸಂಪಾದಿಸಬಹುದು ಎಂಬುದನ್ನು ಮತ್ತೊಮ್ಮೆ ಸಾಬಿತುಪಡಿಸಿದ್ದಾರೆ. ಕಡಿಮೆ ಪ್ರಚಾರದ ಹೊರತಾಗಿಯೂ ಸಿನಿಮಾ ಹಿಂದಿ ಮಾರುಕಟ್ಟೆಯಲ್ಲಿ 30 ಕೋಟಿ ರೂಪಾಯಿ (ನೆಟ್ ಕಲೆಕ್ಷನ್) ಗಳಿಸಿದೆ. ಶೀಘ್ರವೇ 50 ಕೋಟಿ ರೂಪಾಯಿಗಳನ್ನು ಮೀರುವ ನಿರೀಕ್ಷೆ ಇದೆ.