'ಮಠ', 'ಎದ್ದೇಳು ಮಂಜುನಾಥ' ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಗುರುಪ್ರಸಾದ್. "ನಾನು ಸರಸ್ವತಿ ಪುತ್ರ ಎಂದು ಹೇಳಿಕೊಳ್ಳುವ ನಿರ್ದೇಶಕರ ತಲೆ ಖಾಲಿಯಾಗಿದೆ ಅನಿಸುತ್ತದೆ" ಎಂಬುದೀಗ ಹಲವರಿಂದ ಬರುತ್ತಿರುವ ಟೀಕೆ. ತಮ್ಮ ಸಿನಿಮಾಗಳಲ್ಲಿ ಸಮಾಜದ ಅಂಕುಡೊಂಕುಗಳನ್ನು ಲೇವಡಿ ಮಾಡುತ್ತಾ, ಹಾಸ್ಯದ ಮೂಲಕ ತಿವಿಯುತ್ತಿದ್ದ ಗುರು ಪ್ರಸಾದ್ ಅವರೇ ಈಗ ಟೀಕೆಗಳಿಗೆ ಗುರಿಯಾಗಿದ್ದಾರೆ.
ಹೌದು, ನವರಸನಾಯಕ ಜಗ್ಗೇಶ್ ಕೂಡ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಬಹಳ ವರ್ಷಗಳ ಬಳಿಕ ಜಗ್ಗೇಶ್ ಹಾಗೂ ಗುರು ಪ್ರಸಾದ್ ಮಾಡಿರುವ 'ರಂಗನಾಯಕ' ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವಿತ್ತು. ಆದರೆ ಸಿನಿಮಾಗೆ ಹಿನ್ನಡೆಯಾಗಿದೆ. ನಂಬಲಾಸಾಧ್ಯವಾದರೂ ಇದು ಸತ್ಯ. ಒಂದು ಚಿತ್ರಮಂದಿರ ಹೊರತುಪಡಿಸಿ ಸಂಪೂರ್ಣ ಬೆಂಗಳೂರು ಸುತ್ತಾಡಿದರೂ 'ರಂಗನಾಯಕ'ನ ದರ್ಶನವಾಗುವುದಿಲ್ಲ.
ಜಗ್ಗೇಶ್ ಹಾಗೂ ಗುರು ಪ್ರಸಾದ್ ಹದಿನೈದು ವರ್ಷಗಳ ನಂತರ ಜತೆಯಾಗಿ ಸಿನಿಮಾ ಮಾಡಿರುವುದು ಬೆಟ್ಟದಷ್ಟು ನಿರೀಕ್ಷೆಗೆ ಕಾರಣ. ಹಾಗಂತ ಇದೊಂದೇ ಸಂಗತಿಯಂತೂ ಅಲ್ಲ. ಗುರುಪ್ರಸಾದ್ ಚಿತ್ರದ ಬಿಡುಗಡೆಗೂ ಮುನ್ನ ಆಡಿದ ಕೆಲವು 'ಮಾತು'ಗಳೂ ಕಾರಣವಾಗಿವೆ. ಹೀಗಾಗಿ 'ರಂಗನಾಯಕ' ಮೂಲಕ ನಿಜಕ್ಕೂ ಗುರುಪ್ರಸಾದ್ ಏನನ್ನೋ ಹೇಳ ಹೊರಟಿದ್ದಾರೆ ಎಂಬ ಭಾವನೆ ಬಹುತೇಕರಲ್ಲಿ ಮನೆ ಮಾಡಿತ್ತು.
ಆದರೆ ಮೊದಲ ದಿನದ ಮೊದಲ ಶೋ ಮುಗಿಯುವಷ್ಟರಲ್ಲೇ 'ರಂಗನಾಯಕ' ನಿರೀಕ್ಷೆ ಮುಟ್ಟಲಿಲ್ಲ ಅನ್ನೋ ಅಭಿಪ್ರಾಯ ಹಲವರಿಂದ ವ್ಯಕ್ತವಾಯಿತು. ಗುರು ಪ್ರಸಾದ್ ನಿರ್ದೇಶನದ ಬಗ್ಗೆ ಸ್ವತಃ ಜಗ್ಗೇಶ್ ಅಸಮಾಧಾನ ಹೊರಹಾಕಿರುವುದು ಗಾಂಧಿನಗರದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿದೆ. ಇತ್ತೀಚೆಗೆ ರಾಯರ ಸನ್ನಿಧಿಯಲ್ಲಿ ಸೋಷಿಯಲ್ ಮೀಡಿಯಾ ಲೈವ್‌ಗೆ ಬಂದಿದ್ದ ನಟ, ಪ್ರೇಕ್ಷಕರಲ್ಲಿ ಕ್ಷಮೆ ಕೋರಿದ್ದಾರೆ.