ಅದ್ಧೂರಿ ಮೇಕಿಂಗ್ ಹಾಗೂ ಸ್ಟೈಲಿಷ್ ಸಿನಿಮಾಗಳಿಂದಲೇ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೊಂದಿರುವ ನಿರ್ದೇಶಕ ಹಾಗೂ ನಿರ್ಮಾಪಕ ಇಂದ್ರಜಿತ್ ಲಂಕೇಶ್. ಸದ್ಯ ಗೌರಿ ಚಿತ್ರದ ಮೂಲಕ ಪುತ್ರ ಸಮರ್ಜಿತ್ ಲಂಕೇಶ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಟೀಸರ್ ಹಾಗು ಹಾಡುಗಳಿಂದಲೇ ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿರುವ ಗೌರಿ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ.
ಚಿತ್ರದ ಟೀಸರ್ ನೋಡಿದವರು ಇದೊಂದು ಆ್ಯಕ್ಷನ್ ಸಿನಿಮಾ ಅಂತಾ ಅಂದುಕೊಂಡಿದ್ದಾರೆ. ಆದರೆ ಗೌರಿ ಆ್ಯಕ್ಷನ್ ಚಿತ್ರವಲ್ಲ, ಮ್ಯೂಸಿಕಲ್ ಸಿನಿಮಾ. ಇದರಲ್ಲಿ ಪ್ರೀತಿ, ಎಮೋಷನ್, ಭರ್ಜರಿ ಆ್ಯಕ್ಷನ್ ಇದೆ. ಏಳು ಹಾಡುಗಳಿದ್ದು, ಕಥೆಗೆ ತಕ್ಕಂತೆ ಹೆಣೆಯಲಾಗಿದೆ. 4 ಜನ ಸಂಗೀತ ನಿರ್ದೇಶಕರು, 14 ಗಾಯಕರು, ಐವರು ಗೀತರಚನೆಕಾರರು ಕೆಲಸ ಮಾಡಿದ್ದಾರೆ.
ಗೌರಿ ಚಿತ್ರಕ್ಕೆ ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಭೇರ್ಗಿ ಹಾಗೂ ಅನಿರುದ್ಧ್ ಶಾಸ್ತ್ರಿ ಸಂಗೀತ ಸಂಯೋಜಿಸಿದರೆ, ಮ್ಯಾಥ್ಯೂಸ್ ಮನು ರೀ ರೆಕಾರ್ಡಿಂಗ್ ಮಾಡಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಕವಿರಾಜ್, ಕೆ.ಕಲ್ಯಾಣ್, ವರದರಾಜ್ ಚಿಕ್ಕಬಳ್ಳಾಪುರ, ಗುಬ್ಬಿ ಹಾಡುಗಳನ್ನು ರಚಿಸಿದ್ದಾರೆ. ಕೈಲಾಶ್ ಖೇರ್, ಚಂದನ್ ಶೆಟ್ಟಿ, ಅನಿರುದ್ಧ್ ಶಾಸ್ತ್ರಿ, ಜಾವೇದ್ ಅಲಿ, ಅನನ್ಯ ಭಟ್, ನಿಹಾಲ್ ತೌರೋ, ಅದಿತಿ ಸಾಗರ್, ಬಾಲಸುಬ್ರಹ್ಮಣ್ಯಂ, ಪ್ರಜ್ಞಾ ಮರಾಠೆ, ಸಮರ್ಜಿತ್ ಮುಂತಾದವರು ಹಾಡುಗಳನ್ನು ಹಾಡಿದ್ದಾರೆ.
ಸಮರ್ಜಿತ್ ಲಂಕೇಶ್ ಜೊತೆ ಸಾನ್ಯಾ ಅಯ್ಯರ್ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಇವರೊಂದಿಗೆ ನೀನಾಸಂ ಅಶ್ವಥ್, ಮಾನಸೀ ಸುಧೀರ್, ಸಂಪತ್ ಮೈತ್ರೇಯಾ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ. ಎ.ಜೆ.ಶೆಟ್ಟಿ ಹಾಗೂ ಕೃಷ್ಣಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಮಾಸ್ತಿ ಮಂಜು, ರಾಜಶೇಖರ್ ಹಾಗೂ ಮಧು ಸಂಭಾಷಣೆ ಬರೆದಿದ್ದಾರೆ. ರವಿವರ್ಮ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ.