ಕನ್ನಡ ಚಿತ್ರರಂಗದಲ್ಲೀಗ ಹೊಸ ಹುರುಪು. ಕಳೆದ ವಾರ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿದ್ದ ಭೀಮ ಸಿನಿಮಾ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇಂದು ಮತ್ತೆರಡು ಬಹುನಿರೀಕ್ಷಿತ ಚಿತ್ರಗಳಾದ ಭೀಮ ಮತ್ತು ಕೃಷ್ಣಂ ಪ್ರಣಯ ಸಖಿ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದೆ. ಕನ್ನಡದ ಹಲವು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಅದರಂತೆ ಸ್ಯಾಂಡಲ್ವುಡ್ನ ಖ್ಯಾತ ನಟ ರಕ್ಷಿತ್ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಬಿಡುಗಡೆಗೆ ಸಜ್ಜಾಗುತ್ತಿದೆ.
ಸದ್ಯ ಚಿತ್ರದಿಂದ ಅನಾವರಣಗೊಂಡಿರುವ ಕಂಟೆಂಟ್ಗಳು ಇದೊಂದು ಉತ್ತಮ ಕಥೆಯುಳ್ಳ ಸಿನಿಮಾ ಎಂಬುದನ್ನು ಸೂಚಿಸಿದೆ. ಸಿನಿಮಾದ ಪೋಸ್ಟರ್ಸ್, ಹಾಡುಗಳು ಬಿಡುಗಡೆ ಆಗಿ ಸಿನಿಪ್ರಿಯರ ಗಮನ ಸೆಳೆದಿದ್ದವು. ಅಷ್ಟಕ್ಕೂ ಇದು ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರವಲ್ಲವೇ. ಹಾಗಾಗಿ, ಪ್ರೇಕ್ಷಕರು ಸಿನಿಮಾ ಬಿಡುಗಡೆ ಯಾವಾಗ ಎಂದು ಪ್ರಶ್ನಿಸಿದ್ದರು. ಅಂತಿಮವಾಗಿ 'ಇಬ್ಬನಿ ತಬ್ಬಿದ ಇಳೆಯಲಿ' ರಿಲೀಸ್ ಡೇಟ್ ಅನೌನ್ಸ್ ಮಾಡುವ ಸಮಯ ಒದಗಿ ಬಂದಿದೆ. ಈ ಬಗ್ಗೆ ರಕ್ಷಿತ್ ಶೆಟ್ಟಿ ಮಾಲೀಕತ್ವದ ಪರಂವಃ ಸಂಸ್ಥೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. ವರಮಹಾಲಕ್ಷ್ಮಿ ಹಬ್ಬದಂದು ತಮ್ಮ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ 'ಇಬ್ಬನಿ ತಬ್ಬಿದ ಇಳೆಯಲಿ' ಪೋಸ್ಟರ್ ಹಂಚಿಕೊಂಡ ರಕ್ಷಿತ್ ಶೆಟ್ಟಿ, ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದ ಬಿಡುಗಡೆ ದಿನಾಂಕವನ್ನು ನಾಳೆಯ ದಿವ್ಯ ದಿನದಂದು ಪ್ರಕಟಿಸಲಾಗುತ್ತದೆ. ನಮ್ಮೊಂದಿಗಿರಿ ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್ನಲ್ಲಿ ಸಿನಿಮಾದ ಶೀರ್ಷಿಕೆ ಜೊತೆಗೆ ಆಗಸ್ಟ್ 16 ಎಂಬುದನ್ನು ದೊಡ್ಡದಾಗಿ ಬರೆಯಲಾಗಿದೆ. ಜೊತೆಗೆ ವರಮಹಾಲಕ್ಷ್ಮಿ ಹಬ್ಬದಂದು ಗ್ರ್ಯಾಂಡ್ ಅನೌನ್ಸ್ಮೆಂಟ್ ಆಗಲಿದೆ ಎಂಬುದನ್ನೂ ಬರೆಯಲಾಗಿದೆ.
ಮತ್ತೊಂದೆಡೆ ಸಾಂಗ್ ಪೋಸ್ಟರ್ ಹಂಚಿಕೊಂಡ ಪರಂವಃ ಸ್ಟುಡಿಯೋಸ್, ''ಪ್ರೀತಿಯ ಸಂಭ್ರಮಾಚಾರಣೆಗೆ ಇನ್ನು ಕಾಯಬೇಕಿಲ್ಲ. ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದ ಬಿಡುಗಡೆಯ ದಿನಾಂಕವನ್ನು ಆಗಸ್ಟ್ 16ರಂದು ಅನಾವರಣಗೊಳಿಸಲಿದ್ದೇವೆ'' ಎಮದು ಬರೆದುಕೊಂಡಿದ್ದಾರೆ.