ಸದ್ಯ ಕನ್ನಡ ಚಿತ್ರರಂಗದಲ್ಲಿ 'ಭೀಮ' ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ನಟ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಈ ಚಿತ್ರ ಕಳೆದ ಶುಕ್ರವಾರ ಬಿಡುಗಡೆ ಆಗಿದ್ದು, ಅತ್ಯುತ್ತಮ ಪ್ರದರ್ಶನ ಮುಂದುವರಿಸಿದೆ. ಥಿಯೇಟರ್ಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿರೋ ನಡುವೆ ಬಂದ ಈ ಸಿನಿಮಾ ಸೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ವ್ಯವಹಾರ ನಡೆಸಿದೆ. ಗೆಲುವಿನ ನಗೆ ಬೀರಿರುವ ಕನ್ನಡ ಚಿತ್ರರಂಗದಲ್ಲೀಗ ಹಲವು ಸಿನಿಮಾಗಳು ಬಿಡುಗಡೆ ಹೊಸ್ತಿಲಿನಲ್ಲಿದ್ದು, ನಾಳೆ ಬಹುನಿರೀಕ್ಷಿತ ಚಿತ್ರಗಳಾದ 'ಗೌರಿ' ಮತ್ತು 'ಕೃಷ್ಣಂ ಪ್ರಣಯ ಸಖಿ' ಚಿತ್ರಮಂದಿರ ತಲುಪಲಿದೆ.
ಪಿ.ಲಂಕೇಶ್ ಪುತ್ರ ಇಂದ್ರಜಿತ್ ಲಂಕೇಶ್ ಅವರು ನಿರ್ದೇಶನದ ಜೊತೆಗೆ ನಿರ್ಮಾಣ ಮಾಡಿರೋ 'ಗೌರಿ' ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ತಮ್ಮ ಈ ಬಹುನಿರೀಕ್ಷಿತ ಚಿತ್ರದ ಮೂಲಕ ಮಗ ಸಮರ್ಜಿತ್ ಲಂಕೇಶ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಈಗಾಗಲೇ ಟ್ರೇಲರ್ ಹಾಗೂ ಹಾಡುಗಳಿಂದ ಭರವಸೆ ಹುಟ್ಟಿಸಿರೋ ಗೌರಿ ಚಿತ್ರದಲ್ಲಿ ಸಮರ್ಜಿತ್ ಜೊತೆ ಸಾನ್ಯಾ ಅಯ್ಯರ್ ರೊಮ್ಯಾನ್ಸ್ ಮಾಡಿದ್ದಾರೆ. ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿರೋ ಈ ಚಿತ್ರ ಚಿತ್ರ ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ ಅನ್ನೋದು ನಾಳೆ ತಿಳಿಯಲಿದೆ.
ಮಗನ ಮೊದಲ ಸಿನಿಮಾ ಆಗಿರೋ ಹಿನ್ನೆಲೆಯಲ್ಲಿ ಸ್ಯಾಂಡಲ್ವುಡ್ನ ಸ್ಟೈಲಿಶ್, ಕ್ರಿಯೇಟಿವ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ದೊಡ್ಡ ಮಟ್ಟದಲ್ಲಿ ಸಿನಿಮಾ ಪ್ರಚಾರ ಮಾಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಪ್ರೀ ರಿಲೀಸ್ ಈವೆಂಟ್ ಅನ್ನು ಬೆಂಗಳೂರಿನ ಮಾಲ್ ಒಂದರಲ್ಲಿ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಸಮಾರಂಭಕ್ಕೆ ಸಾಕ್ಷಿಯಾದ ರಿಯಲ್ ಸ್ಟಾರ್ ಉಪೇಂದ್ರ ಚಿತ್ರದ ಯಶಸ್ಸಿಗೆ ಶುಭ ಹಾರೈಸಿದ್ದರು. ಅದಕ್ಕೂ ಮುನ್ನ ಚಿಕ್ಕ ಸುದೀಪ್ ಅವರು ಚಿತ್ರತಂಡಕ್ಕೆ ಶುಭ ಕೋರಿದ್ದರು.