ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಕನ್ನಡ ಸೀಸನ್ 11' ಫಿನಾಲೆ ಹೊಸ್ತಿಲಿನಲ್ಲಿದೆ. ಮನೆಯಲ್ಲಿ ಉಳಿದುಕೊಂಡಿರುವ ಮತ್ತು ಹೊರಹೋಗಿರುವ ಪ್ರತಿ ಸ್ಪರ್ಧಿಗಳು ತಮ್ಮದೇ ಆದ ಜನಪ್ರಿಯತೆ ಸಂಪಾದಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುವಲ್ಲಿ ಯಶ ಕಂಡಿದ್ದಾರೆ. ಅದರಲ್ಲಿ ಗೋಲ್ಡ್ ಸುರೇಶ್ ಕೂಡಾ ಒಬ್ಬರು.
ಮಾಜಿ ಸ್ಪರ್ಧಿ ಗೋಲ್ಡ್ ಸುರೇಶ್ ಅವರು ಸದ್ಯ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿರುವ ಧನರಾಜ್ ಆಚಾರ್ ಮತ್ತು ಹನುಮಂತು ಅವರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಅವರನ್ನು ಮಾವ ಅಂತಲೇ ಕರೆಯುತ್ತಿದ್ದರು. ಇದೀಗ ಮಾವನಾಗಿ, ಕಂದಮ್ಮನಿಗೆ ತೊಟ್ಟಿಲು ಉಡುಗೊರೆ ನೀಡೋ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಭೇಟಿಯ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ವಿಡಿಯೋದಲ್ಲಿ, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ ಧನರಾಜ. ಮನೆಗೆ ಹೋಗ್ತೀನಿ ಅಂತಾ ಹೇಳಿದ್ದೆ. ಬಂದಿದ್ದೇನೆ ಎಂದು ಗೋಲ್ಡ್ ಸುರೇಶ್ ತಿಳಿಸಿದ್ದಾರೆ. ಧನರಾಜ್ ಮನೆಯವರೊಂದಿಗೆ ಮಾತನಾಡುತ್ತಾ, ಅವನು ತೊಟ್ಟಿಲನ್ನು ಸೋದರಮಾವ ಕೊಡಬೇಕೆಂದು ತಿಳಿಸಿದ್ದ. ನಿನಗೆ ಕೊಡಕ್ಕೆ ಬರುತ್ತೋ ಇಲ್ವೋ ಎಂಬುದನ್ನು ನೋಡು ಎಂದೂ ಕೂಡಾ ಹೇಳಿದ್ದ. ಅದಕ್ಕೆ ನಾನೇ ಸೋದರ ಮಾವ ಆಗುತ್ತೇನೆಂದು ಹೇಳ್ಬಿಟ್ಟು ಬಂದಿದ್ದೆ ಎಂದು ತಿಳಿಸಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಧನರಾಜ್ ಮಗಳನ್ನು ಎತ್ತಿ ಮುದ್ದಾಡಿರೋದನ್ನು ಕಾಣಬಹುದು.