ಕರ್ನಾಟಕ

karnataka

ರಕ್ತ ಸಂಬಂಧಗಳಿಗೂ ಮೀರಿದ್ದು ವಿಷ್ಣು-ಅಂಬಿ 'ಸ್ನೇಹ' : ದಿಗ್ಗಜರ ಗೆಳೆತನ ಸ್ಮರಿಸಿದ ಅಭಿಮಾನಿಗಳು - Vishnuvardhan Ambareesh Friendship

By ETV Bharat Karnataka Team

Published : Aug 4, 2024, 5:30 AM IST

ಸ್ನೇಹ, ಈ ಪದವೇ ವಿಶೇಷ. ಕಿರುನಗೆಯಲ್ಲಿ ಶುರುವಾಗಿ, ರಕ್ತಸಂಬಂಧಗಳನ್ನೂ ಮೀರಿಸುವಂಥ ಬಾಂಧವ್ಯ. ಕೆಲವರ ಬಾಳಲ್ಲಿ ಕೊನೆ ಉಸಿರಿರುವರೆಗೂ ಉಳಿಯುವ ಅದ್ಭುತ ಸಂಬಂಧವಾಗಿ 'ಸ್ನೇಹ' ಉಳಿದುಕೊಳ್ಳುತ್ತವೆ. ಕನ್ನಡ ಚಿತ್ರರಂಗಕ್ಕೆ ಬಂದರೆ ದಿಗ್ಗಜರಾದ ಸಾಹಸಸಿಂಹ ವಿಷ್ಣುವರ್ಧನ್​​ ಮತ್ತು ರೆಬೆಲ್​ ಸ್ಟಾರ್ ಅಂಬರೀಶ್​ ಅವರ ಗೆಳೆತನ ಸರ್ವರಿಗೂ ಮಾದರಿಯಾಗಿದೆ.

Vishnuvardhan Ambareesh Friendship, Diggajaru Poster
ದಿಗ್ಗಜರು ಪೋಸ್ಟರ್, ವಿಷ್ಣುವರ್ಧನ್ - ಅಂಬರೀಷ್. (Film Poster)

ಆಗಸ್ಟ್​ ತಿಂಗಳ ಮೊದಲ ಭಾನುವಾರ 'ಸ್ನೇಹ ದಿನ' ಆಚರಿಸಲಾಗುತ್ತದೆ. ಈ ಜಗದಲ್ಲಿ ಪ್ರೀತಿ, ಪ್ರೇಮ, ರಕ್ತ ಸಂಬಂಧಗಳ ಜೊತೆಗೆ ಸ್ನೇಹ ಸಂಬಂಧವೂ ಕೂಡಾ ತನ್ನದೇ ಆದ ಮಹತ್ವ ಹೊಂದಿದೆ. ಬಹುತೇಕರು ತಮ್ಮ ಜೀವನದಲ್ಲಿ ಸ್ನೇಹಕ್ಕೆ ಮೊದಲ ಆದ್ಯತೆ ಕೊಡುತ್ತಾರೆ. ಅಷ್ಟರ ಮಟ್ಟಿಗೆ ಗೆಳೆತನ, ಗೆಳೆಯರು ಅವರ ಜೀವನದಲ್ಲಿ ಪ್ರಭಾವ ಬೀರಿರುತ್ತಾರೆ.

ಇನ್ನು, ಕನ್ನಡ ಚಿತ್ರರಂಗದ ವಿಚಾರಕ್ಕೆ ಬಂದರೆ ಬಹುತೇಕ ಬಾಯಲ್ಲಿ ಬರುವ ಮೊದಲ ಹೆಸರು ವಿಷ್ಣುವರ್ಧನ್​ ಮತ್ತು ಅಂಬರೀಶ್​​. ಹೌದು, ಸಾಹಸಸಿಂಹ ಮತ್ತು ರೆಬೆಲ್​ ಸ್ಟಾರ್ ಇಹಲೋಕ ತ್ಯಜಿಸಿ ದಿನಗಳುರುಳಿದರೂ, ಅವರ ಸ್ನೇಹಸ್ಮರಣೆ ಸದಾ ಆಗುತ್ತದೆ. ಅವರ ಹೆಸರಿನಲ್ಲಿ ನಡೆಯುವ ಮಾನವೀಯ ಕಾರ್ಯಗಳು ಒಂದೆಡೆಯಾದ್ರೆ, ಗೆಳೆತನ ಅಂದ್ರೆ ಹೀಗಿರಬೇಕು ಅಂತಾ ಉದಾಹರಣೆ ಕೊಡುವವರ ಬಳಗ ಮತ್ತೊಂದೆಡೆ.

ಅಂಬಿ ಮತ್ತು ವಿಷ್ಣು, ರಕ್ತ ಸಂಬಂಧಗಳಿಗೂ ಮೀರಿದ್ದ ಬಂಧ ಗೆಳೆತನ ಎಂದು ಸಾಬೀತುಪಡಿಸಿದ ಜೋಡಿ. ಕನ್ನಡ ಚಿತ್ರರಂಗದಲ್ಲಿ ಇವರದ್ದು ಮಾದರಿ ಗೆಳೆತನ. ಅಭಿಮಾನಿಗಳು, ಜನಸಾಮಾನ್ಯರಿಂದ ಹಿಡಿದು ಇಂದಿನ ಚಿತ್ರರಂಗದ ಖ್ಯಾತನಾಮರೂ ಕೂಡ ಈ ಜೋಡಿಯ ಹೆಸರನ್ನೇ ಮೊದಲು ತೆಗೆದುಕೊಳ್ಳೋದುಂಟು. ಪರಸ್ಪರ ಬೆಂಬಲ, ವಿಶ್ವಾಸ, ಸಾಥ್ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡಿದ ಜೋಡಿಯಿದು.

'ನಾಗರಹಾವು' ಚಿತ್ರದಲ್ಲಿ ಮೊದಲ ಬಾರಿಗೆ ಸ್ಕ್ರೀನ್​ ಶೇರ್: 1972ರಲ್ಲಿ ಬಂದ 'ನಾಗರಹಾವು' ಚಿತ್ರದಲ್ಲಿ ವಿಷ್ಣುವರ್ಧನ್​ ಮತ್ತು ಅಂಬರೀಷ್ ತೆರೆಹಂಚಿಕೊಂಡಿದ್ದರು. ಈ ಚಿತ್ರ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಯಿತು. ಈ ಚಿತ್ರದ ಮೂಲಕ ದಿಗ್ಗಜರ ಗೆಳೆತನ ಆರಂಭವಾಯಿತು. ನಂತರ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ತೆರೆಮೇಲೆ ಮಾತ್ರವಲ್ಲದೇ ನಿಜಜೀವನದಲ್ಲೂ ಬೆಸ್ಟ್​ ಫ್ರೆಂಡ್ಸ್ ಆಗಿ ಸಿಕ್ಕಾಪಟ್ಟೆ ಫೇಮಸ್​ ಆದ್ರು.

ಅಂಬಿ ವಿಷ್ಣು ತೆರೆಹಂಚಿಕೊಂಡ ಚಿತ್ರಗಳಿವು: ನಾಗರಹಾವು, ಹಬ್ಬ, ಅವಳ ಹೆಜ್ಜೆ, ಒಂದೇ ರೂಪ ಎರಡು ಗುಣ, ದಿಗ್ಗಜರು, ಮಹಾ ಪ್ರಚಂಡರು, ಮುಯ್ಯಿಗೆ ಮುಯ್ಯಿ, ಭಾಗ್ಯ ಜ್ಯೋತಿ, ಚಿನ್ನ ನಿನ್ನ ಮುದ್ದಾಡುವೆ, ಸೀತೆ ಅಲ್ಲ ಸಾವಿತ್ರಿ, ಹೊಸಿಲು ಮೆಟ್ಟಿದ ಹೆಣ್ಣು, ಕರುಳಿನ ಕುಡಿ, ಬಂಗಾರದ ಗುಡಿ, ಸ್ನೇಹ ಸೇಡು, ಸ್ನೇಹಿತರ ಸವಾಲ್​, ಇತ್ಯಾದಿ. ಕೆಲ ಚಿತ್ರಗಳಲ್ಲಿ ಇಬ್ಬರೂ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ಒಬ್ಬರು ಮುಖ್ಯಭೂಮಿಕೆ ವಹಿಸಿದ್ದರೆ ಇನ್ನೋರ್ವರು ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಅವುಗಳೆಂದರೆ ಪ್ರೇಮಲೋಕ, ನೀನು ನಕ್ಕರೆ ಹಾಲು ಸಕ್ಕರೆ, ಸಿರಿತನಕ್ಕೆ ಸವಾಲ್, ಅಮರ್​ನಾಥ್​, ಡ್ರೈವರ್​ ಹನುಮಂತು, ನಾಗಕನ್ಯೆ ಇತ್ಯಾದಿ.

ಇದನ್ನೂ ಓದಿ:ಶೀಘ್ರದಲ್ಲೇ ತರುಣ್​​ ಸುಧೀರ್-ಸೋನಾಲ್ ವಿವಾಹ: ಮಾಹಿತಿ ಹಂಚಿಕೊಂಡ ನಿರ್ದೇಶಕ-ನಟಿ ಜೋಡಿ - Tharun Sonal Wedding Announcement

ಹೀಗೆ ಹಲವು ಚಿತ್ರಗಳಲ್ಲಿ ತೆರೆಹಂಚಿಕೊಂಡ ಇವರು ಪರಸ್ಪರರ ಚಿತ್ರಗಳಲ್ಲಿ ಬೆಂಬಲ ಕೊಡುತ್ತಾ ಬಂದರು. ನಿಜಜೀವನದಲ್ಲಿ ಮಾದರಿ ಗೆಳೆಯರಾಗಿ ಗುರುತಿಸಿಕೊಂಡರು.

ABOUT THE AUTHOR

...view details