ಹೈದರಾಬಾದ್:ಜೂನಿಯರ್ ಎನ್‌ಟಿಆರ್ ನಟನೆಯ ಬಹು ನಿರೀಕ್ಷಿತ 'ದೇವರ - ಭಾಗ 1' ಚಿತ್ರದ ಚಿತ್ರೀಕರಣ ಭಾಗಶಃ ಪೂರ್ಣಗೊಂಡಿದೆ. ಕೊನೆಯ ಹಂತದ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಅದು ಕೂಡ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ನಟಿ ಜಾನ್ವಿ ಕಪೂರ್ ಮೊದಲ ಬಾರಿಗೆ ಟಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಚಿತ್ರ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ.
ಇದರ ನಡುವೆ ಎನ್‌ಟಿಆರ್ ಬಾಲಿವುಡ್ನ 'ವಾರ್ 2' ಚಿತ್ರದಲ್ಲಿ ನಟಿಸುತ್ತಿದ್ದು, ಅದರ ಚಿತ್ರೀಕರಣ ಕೂಡ ಆರಂಭಗೊಂಡಿದೆ. ಎರಡೂ ಚಿತ್ರಗಳ ಚಿತ್ರೀಕರಣ ಭರದಿಂದ ಸಾಗಿದ್ದರಿಂದ ಅವರು ಮುಂಬೈಯಿಂದ ಹೈದರಾಬಾದ್ಗೆ, ಹೈದರಾಬಾದಿನಿಂದ ಮುಂಬೈಗೆ ಪ್ರಯಾಣ ಮಾಡಬೇಕಾಗಿದೆ. ‘ವಾರ 2’ ಚಿತ್ರತಂಡ ಈಗಾಗಲೇ ವಿದೇಶದಲ್ಲಿ ಶೂಟಿಂಗ್ ಮುಗಿಸಿದ್ದು, ಇತ್ತೀಚೆಗಷ್ಟೇ ಮುಂಬೈಗೆ ತಲುಪಿದೆ. ಜೂ. ಎನ್‌ಟಿಆರ್ ಸದ್ಯ ಮುಂಬೈನಲ್ಲಿಯೇ ಇದ್ದಾರೆ. ನಟ ಹೃತಿಕ್ ರೋಷನ್ ಮತ್ತು ಕಿಯಾರಾ ಅಡ್ವಾಣಿ ಜೊತೆ ಪರದೆ ಹಂಚಿಕೊಳ್ಳುತ್ತಿರುವ ಮೊದಲ ಚಿತ್ರ ಇದಾಗಿದ್ದರಿಂದ ಸಹಜವಾಗಿ ಈ ಸಿನಿಮಾ ಕೂಡ ಪ್ರೇಮಿಗಳ ಕುತೂಹಲ ಹೆಚ್ಚಿಸಿದೆ. ಚಿತ್ರವನ್ನು ಅಯನ್ ಮುಖರ್ಜಿ ನಿರ್ದೇಶನ ಮಾಡುತ್ತಿದ್ದು, ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಹೊಣೆ ಹೊತ್ತಿದೆ. ‘ವಾರ್ 2‘ ಚಿತ್ರದಲ್ಲಿ ಎನ್‌ಟಿಆರ್ ವಿಲನ್ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.