ಹೈದರಾಬಾದ್:ಟಾಲಿವುಡ್ನ ಪ್ರಖ್ಯಾತ ನಟ ಜೂನಿಯರ್ ಎನ್‌ಟಿಆರ್ ಅವರ ಅಭಿಮಾನಿಗಳಿಗೆ ದೇವರ ಚಿತ್ರತಂಡ ಶುಭಸುದ್ದಿ ನೀಡಿದೆ. ನಾಳೆ (ಮೇ 20) ನಟನ ಜನ್ಮದಿನದ ಹಿನ್ನೆಲೆ ಚಿತ್ರತಂಡ ಅಭಿಮಾನಿಗಳಿಗಾಗಿ ಹಾಡೊಂದನ್ನು ಬಿಡುಗಡೆ ಮಾಡಿದೆ. ಹಾಡು ಬಿಡುಗಡೆಯಾದ ಒಂದೇ ಗಂಟೆಯಲ್ಲಿ 14 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.
ಎನ್‌ಟಿಆರ್ ಜನ್ಮದಿನಕ್ಕೂ ಒಂದು ದಿನ ಮುನ್ನ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದು, ಅಭಿಮಾನಿಗಳನ್ನು ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡಿದೆ. ಕೊರಟಾಲ ಶಿವ ನಿರ್ದೇಶನದ ಪ್ಯಾನ್ ಇಂಡಿಯಾ ಆಕ್ಷನ್ ಸಿನಿಮಾ ಈ ವರ್ಷದ ಅಕ್ಟೋಬರ್ 10 ರಂದು ಬಿಡುಗಡೆ ಮಾಡಲು ಯೋಜಿಸಲಾಗಿದೆ. ಎನ್‌ಟಿಆರ್ ಜೊತೆಗೆ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ನಟಿಸಿದ್ದಾರೆ.
ಫಿಯರ್ಲೆಸ್ ಸಾಂಗ್:ಬಿಡುಗಡೆಯಾಗಿರುವ ಖತರ್ನಾಕ್ ಹಾಡಿಗೆ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನ ನೀಡಿದ್ದು, ಎನ್‌ಟಿಆರ್ ಅವರನ್ನು ಇದರಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ಕೆಲ ಹೊಡೆದಾಟ ದೃಶ್ಯಾವಳಿಗಳು ಇದರಲ್ಲಿವೆ. ಎನ್‌ಟಿಆರ್ ಖದರ್ಗೆ ತಕ್ಕಂತೆ ಹಾಡನ್ನು ನಿರ್ಮಿಸಲಾಗಿದೆ.
ಇನ್ನೂ, ಸಿನಿಮಾ ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಅನಿರುದ್ಧ್ ರವಿಚಂದರ್ ಜೊತೆಗೆ ಸಂತೋಷ್ ವೆಂಕಿ ಕೂಡ ಸಂಗೀತ ನಿರ್ದೇಶನ ನೀಡಿದ್ದಾರೆ. ದೇವರ ಸಿನಿಮಾ ಎರಡು ಭಾಗಗಳಲ್ಲಿ ಚಿತ್ರೀಕರಣವಾಗುತ್ತಿದೆ. ಬಾಲಿವುಡ್ನ ಸೈಫ್ ಅಲಿ ಖಾನ್, ಪ್ರಕಾಶ್ ರಾಜ್ ಸೇರಿದಂತೆ ಹಲವು ಸಿನಿಮಾದಲ್ಲಿದ್ದಾರೆ. ಆಕರ್ಷಕ ನಿರೂಪಣೆ, ಖಡಕ್ ಸಂಗೀತ, ಎನ್‌ಟಿಆರ್ ದೈತ್ಯ ನಟನೆಯ ದೇವರ ಸಿನಿಮಾ ಏಪ್ರಿಲ್‌ನಲ್ಲಿ ತೆರೆಗೆ ಬರಬೇಕಿತ್ತು. ಆದರೆ, ಚಿತ್ರೀಕರಣ ವಿಳಂಬವಾದ ಕಾರಣ ಬಿಡುಗಡೆ ಮುಂದೂಡಲ್ಪಟ್ಟಿತ್ತು.
ಈಚೆಗೆ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿನಿಮಾ ಬಿಡುಗಡೆ ಬಗ್ಗೆ ಮಾತನಾಡಿದ್ದ ಜೂನಿಯರ್ ಎನ್‌ಟಿಆರ್, ದೇವರ ಭಾಗ- 1 ಬಿಡುಗಡೆ ತುಸು ವಿಳಂಬವಾಗಲಿದೆ. ಸಿನಿಮಾಕ್ಕಾಗಿ ಕಾಯುತ್ತಿರುವ ನನ್ನೆಲ್ಲಾ ಅಭಿಮಾನಿಗಳಿಗೆ ಕಾಯುವಿಕೆ ತಕ್ಕ ಪ್ರತಿಫಲ ನೀಡಲಿದ್ದೇವೆ ಎಂದು ಭರವಸೆ ನೀಡಿದ್ದರು. ನಿಮ್ಮ ಕಾಯುವಿಕೆಯು ಸಾರ್ಥಕವಾಗಲಿದೆ. ಚಿತ್ರ ಬಿಡುಗಡೆಯಾದ ನಂತರ ಪ್ರತಿಯೊಬ್ಬ ಅಭಿಮಾನಿಗಳು ಹೆಮ್ಮೆಯಿಂದ ಬೀಗುವಂತೆ ಸಿನಿಮಾ ನಿರ್ಮಿಸಲಾಗಿದೆ ಎಂದು ನಟ ಹೇಳಿದ್ದರು.
ದೇವರ ಸಿನಿಮಾ ಹೊರತಾಗಿ, ಜೂನಿಯರ್ ಎನ್‌ಟಿಆರ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನಟ ಹೃತಿಕ್ ರೋಷನ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದು ವಾರ್ 2 ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ ಹೊಸ ಸಿನಿಮಾದ ಸಿದ್ಧತೆಯಲ್ಲಿದ್ದಾರೆ. ಸಾಹಸಮಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎನ್‌ಟಿಆರ್ ಅವರ ಅಭಿಮಾನಿಗಳು ಮುಂದೆ ರೋಮಾಂಚಕ ಸಿನಿಮಾಗಳನ್ನು ನಿರೀಕ್ಷಿಸಬಹುದು.
ಇದನ್ನೂ ಓದಿ:ಪ್ರಧಾನಿ ಮೋದಿ ಪಾತ್ರದಲ್ಲಿ 'ಬಾಹುಬಲಿ'ಯ ಕಟ್ಟಪ್ಪ? - Kattappa to Turn Modi