ಮುಂಬೈ: ಭಾರತೀಯ ಚಿತ್ರರಂಗದ ಜನಪ್ರಿಯ ಅಭಿನೇತ್ರಿ ದೀಪಿಕಾ ಪಡುಕೋಣೆ ಸದ್ಯ ಗರ್ಭಾವಸ್ಥೆಯ ಕ್ಷಣಗಳನ್ನು ಆನಂದಿಸುತ್ತಿದ್ದಾರೆ. ದೀಪ್ವೀರ್ ಜೋಡಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ದೀಪಿಕಾರ ಗರ್ಭಾವಸ್ಥೆಯ ಈ ಸಂದರ್ಭ ಪತಿ-ನಟ ರಣ್ವೀರ್ ಸಿಂಗ್ ವೃತ್ತಿಜೀವನದ ಸಲುವಾಗಿ ಆಗಾಗ್ಗೆ ಹೊರಗೆ ಕಾಣಿಸಿಕೊಳ್ಳುತ್ತಾರೆ. ಆದರೆ ತಾಯಿಯೊಂದಿಗಿರುವ ದೀಪಿಕಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳೋದು ತೀರಾ ವಿರಳ. ಇದೀಗ ನಟಿಯ ಲೇಟೆಸ್ಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.
ಫೆಬ್ರವರಿ ಅಂತ್ಯಕ್ಕೆ ತಮ್ಮ ಪ್ರೆಗ್ನೆನ್ಸಿ ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡರು. ಆಗ ನಡೆದ ಅಂಬಾನಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ದೀಪಿಕಾ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗೆ ಮತದಾನ ಮಾಡಲು ಬಂದ ವೇಳೆ ನಟಿಯ ನೋಟ ಎಲ್ಲರಿಗೂ ಲಭ್ಯವಾಗಿತ್ತು. ಮೊದಲ ಬಾರಿ ತಾರೆಯ ಬೇಬಿ ಬಂಪ್ ವಿಡಿಯೋ ವೈರಲ್ ಆಗಿತ್ತು. ನಂತರ ಫ್ಯಾಶನ್ ಬ್ರ್ಯಾಂಡ್ ಈವೆಂಟ್ ಒಂದರಲ್ಲಿ ಕಾಣಿಸಿಕೊಂಡಿದ್ದ ನಟಿ ಈಗ ತಮ್ಮ ಕುಟುಂಬಸ್ಥರೊಂದಿಗೆ ಕಾಣಿಸಿಕೊಂಡಿದ್ದಾರೆ. ಹೌದು, ಶನಿವಾರ ಮುಂಬೈನಲ್ಲಿ ತಾಯಿಯೊಂದಿಗೆ ಡಿನ್ನರ್ ಡೇಟ್ ಸಲುವಾಗಿ ನಟಿ ಮನೆಯಿಂದ ಹೊರ ಬಂದಿದ್ದರು. ಆಪ್ತರೊಂದಿಗೆ ಗುಣಮಟ್ಟದ ಸಮಯ ಕಳೆದಿದ್ದಾರೆ.
ತಾಯಿಯಾಗಲಿರುವ ದೀಪಿಕಾ ಪಡುಕೋಣೆ ಫ್ಯಾಮಿಲಿ ಡಿನ್ನರ್ ಟೈಮ್ ಎಂಜಾಯ್ ಮಾಡಿದ್ದಾರೆ. ಶನಿವಾರ ಸಂಜೆ ಬಾಂದ್ರಾದ ರೆಸ್ಟೋರೆಂಟ್‌ನಿಂದ ಹೊರಬಂದ ವೇಳೆ ಅವರನ್ನು ಪಾಪರಾಜಿಗಳು ಸುತ್ತುವರಿದಿದ್ದರು. ನಟಿಯ ಮೊಗದಲ್ಲಿ ಗರ್ಭಾವಸ್ಥೆಯ ಕಳೆ ಎದ್ದು ಕಾಣುತ್ತಿತ್ತು. ಫ್ಲೋರಲ್ ಟಾಪ್ ಮತ್ತು ಜೀನ್ಸ್ ಧರಿಸಿದ್ದರು. ಬನ್ ಹೇರ್ಸ್ಟೈಲ್ನೊಂದಿಗೆ ಕೂಲ್ ಆ್ಯಂಡ್ ಕಂಫರ್ಟೆಬಲ್ ಆಗಿ ಕಾಣಿಸಿಕೊಂಡರು.
ಇದಕ್ಕೂ ಮುನ್ನ ಕೂಡ ದೀಪಿಕಾ ತಮ್ಮ ತಾಯಿಯೊಂದಿಗೆ ಮತ್ತೊಂದು ರೆಸ್ಟೋರೆಂಟ್‌ನಿಂದ ಬರುತ್ತಿರುವ ವಿಡಿಯೋ ವೈರಲ್ ಆಗಿತ್ತು. ಬ್ಯೂಟಿಫುಲ್ ಬ್ಲ್ಯಾಕ್ ಔಟ್ಫಿಟ್ನಲ್ಲಿ ಕಾಣಿಸಿಕೊಂಡರು. ಡೆನಿಮ್ ಜಾಕೆಟ್ ಕೂಡ ಧರಿಸಿದ್ದರು. ಫೋಟೋ, ವಿಡಿಯೋದಲ್ಲಿ ನಟಿಯ ಬೇಬಿ ಬಂಪ್ ಸ್ಪಷ್ಟವಾಗಿ ಗೋಚರಿಸಿದೆ.