ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್ ಹಾಗೂ ಕಂಟೆಂಟ್ ಸಿನಿಮಾಗಳ ಮಧ್ಯೆ ಬಯೋಫಿಕ್ ಚಿತ್ರಗಳು ಕೂಡ ಇತ್ತೀಚೆಗೆ ಹೆಚ್ಚು ಗಮನ ಸೆಳೆಯುತ್ತಿವೆ. ಈ ಸಾಲಿನಲ್ಲಿ ಖ್ಯಾತ ಹರಿದಾಸರಾದ ಭೃಗು ಋಷಿಗಳ ಅಂಶ ಸಂಭೂತರಾದ ಶ್ರೀವಿಜಯದಾಸರ ಕುರಿತಾದ 'ದಾಸವರೇಣ್ಯ ಶ್ರೀ ವಿಜಯದಾಸರು' ಚಿತ್ರ ಕೂಡ ಒಂದು.
ಎಸ್‌ಪಿಜೆ ಮೂವೀಸ್ ಬ್ಯಾನರ್‌ನಲ್ಲಿ ತ್ರಿವಿಕ್ರಮ ಜೋಶಿ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಮಧುಸೂದನ್ ಹವಾಲ್ದಾರ್ ನಿರ್ದೇಶಿಸಿದ್ದಾರೆ. ಮಹಾಮಹಿಮರಾದ ವಿಜಯದಾಸರ ಕುರಿತಾದ ಈ ಚಿತ್ರ ಇದೀಗ ತೆರೆ ಕಾಣಲು ಸಿದ್ಧವಾಗಿದೆ. ಈ ಬಗ್ಗೆ ಚಿತ್ರತಂಡ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದೆ.
ನಿರ್ದೇಶಕ ಮಧುಸೂದನ್ ಹವಾಲ್ದಾರ್ ಮಾತನಾಡಿ, 'ಶ್ರೀಜಗನ್ನಾಥದಾಸರು' ಚಿತ್ರ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು ಎಲ್ಲರಿಗೂ ತಿಳಿದ ಸಂಗತಿ. ಕಳೆದ ವರ್ಷ 'ಶ್ರೀಪ್ರಸನ್ನವೆಂಕಟದಾಸರು' ಚಿತ್ರ ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈಗ ಕರ್ನಾಟಕದ ಮತ್ತೊಬ್ಬ ಶ್ರೇಷ್ಠ ಹರಿದಾಸರಾದ ವಿಜಯದಾಸರ ಕುರಿತಾದ 'ದಾಸವರೇಣ್ಯ ಶ್ರೀವಿಜಯದಾಸರು' ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಎಸ್‌ಪಿಜೆ ಮೂವೀಸ್ ಲಾಂಛನದಲ್ಲಿ ತ್ರಿವಿಕ್ರಮ ಜೋಶಿ ಅವರು ಈ ಚಿತ್ರವನ್ನು ನಿರ್ಮಿಸುವುದರೊಂದಿಗೆ ವಿಜಯದಾಸರ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ವಿಜಯದಾಸರ ಪತ್ನಿ ಅರಳಮ್ಮನ ಪಾತ್ರದಲ್ಲಿ ಶ್ರೀಲತ ಅಭಿನಯಿಸಿದ್ದಾರೆ. ಪ್ರಭಂಜನ ದೇಶಪಾಂಡೆ, ವಿಜಯಾನಂದ ನಾಯಕ್, ಮಾಜಿ ಶಾಸಕರಾದ ಬಸವನಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ. ವಿಜಯಕೃಷ್ಣ ಸಂಗೀತ ನೀಡದ್ದಾರೆ. ಜೆ.ಎಂ.ಪ್ರಹ್ಲಾದ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಹಂಪಿ, ಕನಕಗಿರಿ ಮುಂತಾದ ಕಡೆ ಚಿತ್ರೀಕರಣ ನಡೆದಿದೆ" ಎಂಬೆಲ್ಲಾ ಮಹತ್ವದ ಸಂಗತಿಗಳನ್ನು ತಿಳಿಸಿದರು.