ನಟ ಡಾಲಿ ಧನಂಜಯ್ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ. ನಿರ್ಮಾಪಕ ಕೂಡಾ ಹೌದು. ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಆದ ಸ್ಟಾರ್ಡಮ್ ಹೊಂದಿರುವ ಈ ನಟ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಹಾಗಾಗಿ ನಟನ ವೃತ್ತಿಪರ ಮತ್ತು ವೈಯಕ್ತಿಕ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್ ಸದಾ ಉತ್ಸುಕರಾಗಿರುತ್ತಾರೆ. ನಟನ ಖುಷಿ ಕ್ಷಣದಲ್ಲಿ ತಾವೂ ಭಾಗಿಯಾಗಲು ಇಚ್ಛಿಸುತ್ತಾರೆ. ಧನಂಜಯ್ ಕೂಡಾ ತಮ್ಮ ಅಭಿಮಾನಿಗಳೊಂದಿಗೆ ಗುಣಮಟ್ಟದ ಸಮಯ ಕಳೆಯಲು ಇಚ್ಛಿಸುತ್ತಾರೆ. ಆದ್ರೆ ಈ ಬಾರಿ ಇದು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ.
ಡಾಲಿ ಧನಂಜಯ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನ ಸ್ಟೋರಿ ಸೆಕ್ಷನ್ನಲ್ಲಿ ಕ್ಷಮೆಯಾಚನಾ ಪತ್ರ ಹಂಚಿಕೊಂಡಿದ್ದಾರೆ. ಸ್ಟೋರಿಯಲ್ಲಿ, ''ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ, ಆಗಸ್ಟ್ 23, ಪ್ರತೀ ವರ್ಷದಂತೆ ನಿಮ್ಮೊಡನೆ ಹುಟ್ಟುಹಬ್ಬವನ್ನು ಸಂಭ್ರಮಿಸುವ ಉತ್ಸಾಹವಿದ್ದರೂ, ಕಾರಣಾಂತರಗಳಿಂದ ಆಚರಿಸಲಾಗುತ್ತಿಲ್ಲ. ಕ್ಷಮೆಯಿರಲಿ. ಎಲ್ಲಿರುತ್ತೀರೋ ಅಲ್ಲಿಂದಲೇ ಹರಸಿ, ಹಾರೈಸಿ. ಆದಷ್ಟು ಬೇಗ ಸಿಗೋಣ, ಸಾಕಷ್ಟು ಒಳ್ಳೆ ವಿಷಯಗಳೊಂದಿಗೆ, ಸಂಭ್ರಮಗಳೊಂದಿಗೆ, ಪ್ರೀತಿಯಿರಲಿ. ಇಂತಿ ನಿಮ್ಮ ಪ್ರೀತಿಯ ಡಾಲಿ ಧನಂಜಯ'' ಎಂದು ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಈ ಸಂದೇಶ ನೀಡಿರುವ ಡಾಲಿ ಧನಂಜಯ್, ಈ ಗೈರಿಗೆ ನಿಖರ ಕಾರಣ ತಿಳಿಸಿಲ್ಲ. ಆದ್ರೆ ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಬ್ಯುಸಿ ಶೆಡ್ಯೂಲ್ ಹಿನ್ನೆಲೆಯಲ್ಲಿ ಈ ಬಾರಿ ಹುಟ್ಟುಹಬ್ಬವನ್ನು ಅಭಿಮಾನಿಗಳೊಟ್ಟಿಗೆ ಆಚರಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗಿದೆ. ಕಳೆದ ಬಾರಿ ತಮ್ಮ ಹುಟ್ಟುಹಬ್ಬವನ್ನು ದೊಡ್ಡ ಮಟ್ಟಿಗೇನೆ ಆಚರಿಸಿಕೊಂಡು, ಅಭಿಮಾನಿಗಳಿಗೆ ಸಿನಿಮಾ ಅಪ್ಡೇಟ್ಸ್ ಟ್ರೀಟ್ ಕೊಟ್ಟಿದ್ದರು.
ಈ ಬಾರಿ ಡಾಲಿ ಧನಂಜಯ್ ಅಭಿನಯಿಸುತ್ತಿರುವ ಮುಂದಿನ ಚಿತ್ರಗಳ ಪೋಸ್ಟರ್ ಅಥವಾ ಟೀಸರ್ ಅನಾವರಣಗೊಳ್ಳುವ ಸಾಧ್ಯತೆ ಇದೆ. ವಿಶೇಷವಾಗಿ ಉತ್ತರಕಾಂಡ ಚಿತ್ರದ ಅಪ್ಡೇಟ್ಸ್ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯ ಪುಷ್ಪ 2 ಚಿತ್ರದಿಂದಲೂ ಪೋಸ್ಟರ್ ರಿಲೀಸ್ ಆಗೋ ಸಾಧ್ಯತೆಗಳಿವೆ.