ಭಾನುವಾರ ರಾತ್ರಿ ಕನ್ನಡ ಬಿಗ್ ಬಾಸ್ ಸೀಸನ್ 10ರ ವಿಜೇತರ ಹೆಸರು ಘೋಷಣೆಯಾಗಿದೆ. ಸಂಗೀತಾ ಶೃಂಗೇರಿ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಮನೆಯೊಳಗೆ ಕಾಣಿಸಿಕೊಂಡ ಹಾಗೆಯೇ ಹೊರಗೂ ಅವರದ್ದು ನೇರ ಮಾತು, ದಿಟ್ಟ ವ್ಯಕ್ತಿತ್ವ. ಜಿಯೋ ಸಿನಿಮಾಗೆ ಅವರು ನೀಡಿದ ಸಂದರ್ಶನದಲ್ಲಿಯೂ ಆ ನೇರವಂತಿಕೆ ಕಾಣಿಸುತ್ತದೆ.
''ಹಲೋ ನಾನು ನಿಮ್ಮ ಸಂಗೀತಾ ಶೃಂಗೇರಿ. ತುಂಬಾ ಅಂದ್ರೆ ತುಂಬಾನೇ ಖುಷಿಯಾಗ್ತಿದೆ. ಬಿಗ್ ಬಾಸ್ ಕನ್ನಡ 10ನೇ ಸೀಸನ್ನ ಸೆಕೆಂಡ್ ರನ್ನರ್ ಅಪ್ ನಾನು. ಇಲ್ಲಿವರೆಗೂ ನನ್ನನ್ನು ಗಮನಿಸುತ್ತಾ ಬಂದಿದ್ದೀರ. ಇನ್ಮುಂದೆ ನನ್ನ ಲೈವ್ ಕಾರ್ಯಕ್ರಮ ನೋಡಲು ಆಗುವುದಿಲ್ಲ. ನನ್ನನ್ನು 112 ದಿನಗಳವರೆಗೆ ನೇರವಾಗಿ ತೋರಿಸಿ, ಎಲ್ಲಾ ಜನರ ಜೊತೆಗೆ ಸಂಪರ್ಕದಲ್ಲಿ ಇರಿಸಿದ್ದಕ್ಕೆ ನಾನು ಜಿಯೋ ಸಿನಿಮಾಗೆ ಥ್ಯಾಂಕ್ಸ್ ಹೇಳಲೇಬೇಕು'' -ಸಂಗೀತಾ ಶೃಂಗೇರಿ.
ಅದ್ಭುತ ಪಯಣ: 'ಈ ಬಾರಿ ಒಂದು ಹೊಸ ಅನಭವ ಇತ್ತು. ಫಿನಾಲೆ ವಾರದಲ್ಲಿ ಆರು ಸ್ಪರ್ಧಿಗಳಿದ್ದರು. ಆರರಿಂದ ಟಾಪ್ 5 ಸೆಲೆಕ್ಟ್ ಆದಾಗಲೂ ಸಾಕಷ್ಟು ಎಕ್ಸೈಟ್‌ಮೆಂಟ್ ಇತ್ತು. ನರ್ವಸ್‌ನೆಸ್ ಕೂಡ ಇತ್ತು. 4 ರಿಂದ 3 ಬಂದ ನಂತರ ಸುದೀಪ್ ಅವರೇ ಮನೆಯೊಳಗೆ ಬಂದು ನಮ್ಮನ್ನು ಕರೆದುಕೊಂಡು ಹೋದರು. ಇದು ನನ್ನ ಬದುಕಿನಲ್ಲಿಯೇ ಅತ್ಯುತ್ತಮ ಅನುಭವ. ವೇದಿಕೆಯ ಮೇಲೆ ಮೂರು ಬಾಕ್ಸ್‌ಗಳಿದ್ದವು. ಆ ಬಾಕ್ಸ್‌ನಲ್ಲಿ ಒಂದು ರೆಡ್ ಆಗುತ್ತೆ ಅಂತಾ ಹೇಳಿದ್ರು. ಅದು ನನ್ನ ಎಕ್ಸಿಟ್, ಸೆಕೆಂಡ್ ರನ್ನರ್ ಅಪ್ ಆಗಿ. ವಿನ್ನರ್ ಆಗಲಿಲ್ಲವೆಂದು ಬೇಸರವಿದೆ. ಆದರೂ ನಾನು ಹ್ಯಾಪಿಯಾಗಿದ್ದೇನೆ. ಏಕೆಂದರೆ, ಈ ಪಯಣ ಎಷ್ಟು ಅದ್ಭುತವಾಗಿತ್ತು ಅಂದರೆ ನಾನು ಬಹಳ ಸ್ಟ್ರಾಂಗ್ ಆಗಿದ್ದೇನೆ' ಎಂದು ತಿಳಿಸಿದರು.
ಈ ಮನೆಯಲ್ಲಿ ಸಾಕಷ್ಟು ಕಲಿತಿದ್ದೇನೆ: ಬದುಕಿನಲ್ಲಿ ಹಲವು ಸಮಸ್ಯೆಗಳು ಬರುತ್ತವೆ. ಓಡಿಹೋಗಬೇಕು ಅನಿಸುತ್ತದೆ. ಆದ್ರೆ ನಾನು ಈ ಮನೆಯಲ್ಲಿ ಕಲಿತಿರುವ ಒಂದು ಸಂಗತಿ ಏನೆಂದರೆ ' ಬಿಟ್ಟುಕೊಡಬೇಡಿ, ಆಶಾವಾದಿಯಾಗಿರಿ' ಎಂಬುದು. ಈ ಹೋಪ್ ಅನ್ನುವುದನ್ನು ನಾನು ಮುಂದೆಯೂ ಕ್ಯಾರಿ ಮಾಡ್ತೀನಿ. ಈ ಮನೆಯಲ್ಲಿ ಸಾಕಷ್ಟು ಕಲಿತಿದ್ದೇನೆ. ಬದುಕಿನಲ್ಲಿಯೂ ಸಾಕಷ್ಟು ಕಲಿಯುವುದಿದೆ. ನಾನು ಯಾವತ್ತೂ ಸಮಸ್ಯೆಗಳಿಂದ ಓಡಿಹೋಗುವುದಿಲ್ಲ. ಧೈರ್ಯದಿಂದ ಎದುರಿಸುತ್ತೇನೆ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದರು.
ಯಾರೂ ಫೇಕ್ ಅಲ್ಲ:ಮನೆಯೊಳಗೆ ಎಲ್ಲರೂ ಅವರವರ ಗೇಮ್ ಅನ್ನು ಜೆನ್ಯೂನ್ ಆಗಿಯೇ ಆಡಿದ್ದಾರೆ. ಅದರಲ್ಲಿ ಯಾವ ಅನುಮಾನವೂ ಇಲ್ಲ. ನಾನು ನನ್ನ ಗೇಮ್ ಅನ್ನು ಗೇಮ್ ಅಂತಷ್ಟೇ ಆಡಿಲ್ಲ, ಅದರಲ್ಲಿ ಬದುಕಿದ್ದೀನಿ. ಬೇರೆಯವರ ಬಗ್ಗೆ ನಾನು ಕಮೆಂಟ್ ಮಾಡಲಿಕ್ಕೆ ಆಗುವುದಿಲ್ಲ. ನನ್ನ ಗೇಮ್ ಬಗ್ಗೆಯಷ್ಟೇ ನಾನು ಹೇಳಬಹುದು. ಯಾಕೆಂದರೆ ಅಲ್ಲಿ ಉಳಿದುಕೊಳ್ಳಬೇಕು ಅಂದರೆ ಎಲ್ಲರೂ ಅವರವರ ವ್ಯಕ್ತಿತ್ವವನ್ನು ತೋರಿಸಿಕೊಳ್ಳಬೇಕಾಗುತ್ತದೆ. ಯಾರೇ ಆದರೂ ಅಲ್ಲಿ ಫೇಕ್ ಆಗಿರಲು ಸಾಧ್ಯ ಎಂದು ನನಗೆ ಅನಿಸುವುದಿಲ್ಲ. ಅದರಲ್ಲಿಯೂ ಓಪನ್ ನಾಮಿನೇಷನ್ ಎಂದು ಬಿಗ್ ಬಾಸ್ ಮಾಡಿದ್ದು ಬಹಳ ಒಳ್ಳೆಯದು. ಈ ಸೀಸನ್‌ನಲ್ಲಿ ಕನ್ಫೆಷನ್ ರೂಮ್ಗೆ ಹೋಗಿ ಗೊತ್ತಾಗದೇ ಇರುವ ಹಾಗೆ ನಾಮಿನೇಷನ್ ನಡೆಯಲೇ ಇಲ್ಲ ಎಂದು ಹೇಳಿದರು.
ಈ ಸೀಸನ್ ಬಹಳ ವಿಭಿನ್ನ: ಎಲ್ಲಕ್ಕಿಂತ ಈ ಸಲದ ಸೀಸನ್ ಯಾಕೆ ಡಿಫರೆಂಟ್ ಆಗಿತ್ತು ಅಂದ್ರೆ, ಯಾರೂ ಕೂಡ ಫೇಕ್ ಆಗಿ ಇರಲೇ ಇಲ್ಲ. ಕಳೆದ ಸೀಸನ್‌ನಲ್ಲಿ ಯಾರು ಯಾರನ್ನು ನಾಮಿನೇಟ್ ಮಾಡಿದ್ದಾರೆ ಎಂದು ಗೊತ್ತೇ ಆಗುತ್ತಿರಲಿಲ್ಲ. ಆದರೆ ಈ ಬಾರಿ ಮುಖದ ಮೇಲೇ ಹೇಳುವುದರಿಂದ ನಮಗೂ ಗೊತ್ತಿರುತ್ತಿತ್ತು. ಇವರಿಗೆ ನಾವು ಇಷ್ಟ, ಇವರಿಗೆ ಇಷ್ಟ ಇಲ್ಲ ಅನ್ನೋದು ತಿಳಿಯುತ್ತಿತ್ತು. ಹಾಗಾಗಿ ಪ್ರೇಕ್ಷಕರಿಗೂ ಒಂದು ಐಡಿಯಾ ಇರುತ್ತಿತ್ತು. ಅಲ್ಲದೇ ಪ್ರತಿ ಸಲ ಟಾಸ್ಕ್ ಕೊಡುವಾಗಲೂ ತುಂಬಾ ಕ್ರಿಯೇಟೀವ್ ಆಗಿ ವ್ಯಕ್ತಿತ್ವವನ್ನು ಹೈಲೈಟ್ ಮಾಡುವ ರೀತಿಯಲ್ಲಿ ಟಾಸ್ಕ್ ಕೊಡುತ್ತಿದ್ದರು. ಒಂದೊಂದು ವಾರ ಆಗುತ್ತಿರುವ ಹಾಗೆ ಎಲ್ಲರ ವ್ಯಕ್ತಿತ್ವದ ಒಂದೊಂದು ಛಾಯೆ ಎದ್ದು ಕಾಣಿಸುತ್ತಿತ್ತು. ಇದೇ ಕಾರಣಕ್ಕೆ ಈ ಸೀಸನ್ ಬಹಳ ವಿಭಿನ್ನವಾಗಿತ್ತು ಅನಿಸುತ್ತದೆ ಎಂದರು.
ಪ್ರತಾಪ್ ಜೊತೆಗಿನ ಸ್ನೇಹ;ಪ್ರತಾಪ್ ಮತ್ತು ನನ್ನದು ಅಕ್ಕ ತಮ್ಮನ ಬಾಂಡ್ ಎಂದು ಎಲ್ಲರೂ ಹೇಳುತ್ತಾರೆ. ನಮ್ಮ ನಡುವೆ ಆಳವಾದ ಸ್ನೇಹ ಮೊದಲಿನಿಂದಲೂ ಇತ್ತು. ಮೊದಲಿನಿಂದಲೂ ನಾನು ಅವರಿಗೆ ಸಪೋರ್ಟ್ ಮಾಡುತ್ತಾ ಬಂದಿದ್ದೆ. ನಡುವೆ ಕೆಲ ಕಾಲ ಮನಸ್ತಾಪ ಬಂದಿತ್ತು. ಆದರೆ ಕೊನೆಗೆ ಸರಿಹೋಯ್ತು. ಮನಸ್ತಾಪ ಬಂದರೂ ನಾವು ಸರಿಹೋದೆವು. ಏಕೆಂದರೆ ನಮ್ಮ ಬಾಂಡಿಂಗ್ ಹಾಗಿತ್ತು. ಆ ಪ್ರೀತಿ ಯಾವತ್ತೂ ಕಡಿಮೆ ಆಗಿಲ್ಲ ಎಂದು ಹೇಳಿದರು.
ಕಾರ್ತಿಕ್, ತನಿಷಾ ಜೊತೆಗಿನ ಸ್ನೇಹ: ನನಗೆ ಸ್ನೇಹ ಆಗೋದು ತುಂಬಾ ಕಷ್ಟ. ಈ ಮನೆಯಲ್ಲಿ ಪ್ರಾರಂಭದಲ್ಲಿಯೇ ಕಾರ್ತಿಕ್ ಮತ್ತು ತನಿಷಾ ಜೊತೆ ಫ್ರೆಂಡ್‌ಷಿಪ್ ಆಯ್ತು. ಸಡನ್ ಆಗಿ ಆದ ಫ್ರೆಂಡ್‌ಷಿಪ್ ಅಷ್ಟೇ ಸಡನ್ ಆಗಿ ಹೋಗುವ ಸಾಧ್ಯತೆಯೂ ಸಾಕಷ್ಟು ಇರುತ್ತವೆ. ಇಲ್ಲೂ ಹಾಗೇ ಆಯ್ತು. ನನ್ನ ಮತ್ತು ಅವರ ನಡುವೆ ಕೆಲಸಕ್ಕೆ ಸಂಬಂಧಿಸಿಂತೆ ಮಾತಿನ ಚಕಮಕಿ ನಡೆಯಿತು. ಅದು ಕೊನೆಯವರೆಗೂ ಮುಂದುವರಿಯಿತು ಎಂದು ತಿಳಿಸಿದರು.