ಕನ್ನಡ ಚಿತ್ರರಂಗದಲ್ಲಿ ಮಲ್ಟಿಸ್ಟಾರ್ ಸಿನಿಮಾಗಳು ಕಡಿಮೆ ಆಗುತ್ತಿರುವ ಹೊತ್ತಿನಲ್ಲಿ ಟೈಟಲ್ನಿಂದಲೇ ಸೌಂಡ್ ಮಾಡುತ್ತಿರುವ ಮಲ್ಟಿಸ್ಟಾರ್ ಚಿತ್ರ '45'. ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಟ್ಯಾಲೆಂಟೆಡ್ ನಟ ರಾಜ್ ಬಿ.ಶೆಟ್ಟಿ ಒಟ್ಟಿಗೆ ಅಭಿನಯಿಸಿರುವ ಈ ಚಿತ್ರ ಹಲವು ವಿಶೇಷತೆಗಳಿಂದ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ.
ಸಿನಿಮಾದ ಶೂಟಿಂಗ್ ಕೆಲಸ 106 ದಿನ ನಡೆದಿದ್ದು, ಚಿತ್ರತಂಡ ಕುಂಬಳಕಾಯಿ ಹೊಡೆದಿದೆ. ಈ ಖುಷಿಯಲ್ಲಿ ಶಿವ ರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ.ಶೆಟ್ಟಿ, ನಿರ್ಮಾಪಕ ಎಂ.ರಮೇಶ್ ರೆಡ್ಡಿ, ಕ್ಯಾಮೆರಾಮ್ಯಾನ್ ಸತ್ಯ ಹೆಗ್ಡೆ ಶೂಟಿಂಗ್ ಅನುಭವ ಹಂಚಿಕೊಂಡರು.
ಫೇಸ್ ದ ಫೀಯರ್ ಅಂತಾ ಟ್ಯಾಗ್‌ಲೈನ್ ಹೊಂದಿರುವ '45'ರ ಬಗ್ಗೆ ಮಾತನಾಡಿದ ಶಿವ ರಾಜ್‌ಕುಮಾರ್, ಸಿನಿಮಾದಲ್ಲಿ ಒಂದು ಫಾಸಿಟಿವ್ ಎನರ್ಜಿ ಇದೆ. ನನ್ನ, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಪಾತ್ರಗಳು ಬಹಳ ವಿಭಿನ್ನವಾಗಿವೆ. ಅರ್ಜುನ್ ಜನ್ಯ ಮೊದಲು ಕಥೆ ಹೇಳಿದಾಗ ನನಗೆ ಥ್ರಿಲ್ ಆಗಿತ್ತು. ಆಗ ಈ ಕಥೆಯನ್ನು ಬೇರೆಯವರಿಗೆ ಕೊಡ್ತೀನಿ ಅಂದಿದ್ರು. ಆಗ ನಾನೇ ಅರ್ಜುನ್ಗೆ ನೀವೇ ಡೈರೆಕ್ಟ್ ಮಾಡಿ ಅಂದೆ. ಸಿನಿಮಾ ನಿರ್ಮಾಣಕ್ಕೆ ರಮೇಶ್ ರೆಡ್ಡಿ ಬಂದ್ರು. ಇದು ನನಗೆ ಅರ್ಜುನ್ ಜನ್ಯ ಅವರ ಮೊದಲ ಸಿನಿಮಾ ಅಂತ ಅನಿಸುವುದಿಲ್ಲ, ಅಷ್ಟು ಪರ್ಫೆಕ್ಟ್ ಆಗಿ ನಿರ್ದೇಶನ ಮಾಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಇದು ದಿ ಬೆಸ್ಟ್ ಆ್ಯಕ್ಷನ್ ಸಿನಿಮಾ ಆಗುತ್ತೆ ಎಂದು ಭವಿಷ್ಯ ನುಡಿದರು.
ಬಳಿಕ ಮಾತನಾಡಿದ ಉಪೇಂದ್ರ, ಸತ್ಯ ಹೆಗ್ಡೆ ಕ್ಯಾಮೆರಾ ವರ್ಕ್ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್. ಇನ್ನು ಶಿವಣ್ಣನ ಜೊತೆ ಕೆಲಸ ಮಾಡೋದಂದ್ರೆ ನಮಗೆ ಒಂದು ಪಿಕ್ ನಿಕ್ ತರ. ಶಿವಣ್ಣ ದೊಡ್ಡ ಸ್ಟಾರ್ ಆಗಿದ್ದರೂ ಕೂಡ ಅವರ ಸರಳತೆಗೆ ಎಂಥವರೂ ಕೂಡ ಮನಸೋಲುತ್ತಾರೆ. ಹಾಲಿವುಡ್ನಲ್ಲಿ ಸಿನಿಮಾ ಹೇಗೆ ಬರಬೇಕು ಅಂತಾ ಅನಿಮೇಶನ್ ಮಾಡಿ ಸಿನಿಮಾ ಶೂಟಿಂಗ್ ಮಾಡ್ತಾರೆ. ಅದೇ ರೀತಿ ಅರ್ಜುನ್ ಜನ್ಯ 45 ಸಿನಿಮಾ ಮಾಡಿರೋದು. ಹಾಲಿವುಡ್ ತರ ಅನಿಸುತ್ತೆ. ಈ ಸಿನಿಮಾ ಸೂಪರ್ ಹಿಟ್ ಆಗುತ್ತೆ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ ಬಿ.ಶೆಟ್ಟಿ ಮಾತನಾಡಿ, ಇದು ನನ್ನ ಭಾಗ್ಯ. ಯಾಕಂದ್ರೆ ಶಿವಣ್ಣ ಹಾಗೂ ಉಪೇಂದ್ರ ಸಿನಿಮಾಗಳನ್ನು ನೋಡಿ ಬೆಳೆದವನು ನಾನು. ಅಂಥವರ ಜೊತೆ ಇವತ್ತು ಅಭಿನಯಿಸಿರುವ ಭಾಗ್ಯ ನನ್ನದು. 45 ಸಿನಿಮಾ ಅಪ್ಪಟ ಕನ್ನಡದ ಹೆಮ್ಮೆಯ ಸಿನಿಮಾ ಅಂತಾ ಹೇಳಲು ಸಂತೋಷ ಆಗುತ್ತೆ. ಇನ್ನು ನಿರ್ದೇಶಕ ಅರ್ಜುನ್ ಜನ್ಯ ಕನಸನ್ನು ನಿರ್ಮಾಪಕ ರಮೇಶ್ ರೆಡ್ಡಿ ನನಸು ಮಾಡಿರೋದು ಈ ಸಿನಿಮಾದ ಹೈಲೆಟ್ಸ್ ಅಂದ್ರು.