ಬಾಲಿವುಡ್ನ ಪವರ್ಫುಲ್ ಕಪಲ್ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯಲಿದ್ದಾರಾ? ಎಂಬ ಪ್ರಶ್ನೆ ಬಹಳ ದಿನಗಳ ಹಿಂದೆಯೇ ಎದ್ದಿದೆ. ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಜನಪ್ರಿಯ ತಾರಾ ದಂಪತಿಯಾಗಿ ಗುರುತಿಸಿಕೊಂಡಿರುವ ಐಶ್ ಅಭಿ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ವದಂತಿಗಳು ನಿನ್ನೆ ಮೊನ್ನೆಯದ್ದಲ್ಲ. ವಿಚ್ಛೇದನ ಸುತ್ತ ಹಲವು ಅಂತೆ- ಕಂತೆಗಳು ಎದ್ದಿದ್ದು, ದಂಪತಿ ಈ ಬಗ್ಗೆ ಏನನ್ನೂ ಘೋಷಿಸದ ಹಿನ್ನೆಲೆ ಸದ್ಯಕ್ಕಿದು ವದಂತಿಯಷ್ಟೇ.
ಈ ಬಗ್ಗೆ ಏನಾದರೂ ಸಿಗಲಿದೆಯೇ ಎಂದು ಸೋಷಿಯಲ್ ಮೀಡಿಯಾ ಅಗೆಯುವ ಟ್ರೋಲಿಗರೇ ಟ್ರೋಲ್ ಆಗುವ ಪರಿಸ್ಥಿತಿ ಬಂದಿದೆ. ಏಕೆಂದರೆ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದೆ. ಪ್ರೀತಿ, ಸಂತೋಷ ತುಂಬಿದ ಆತ್ಮೀಯ ಕ್ಷಣವೊಂದು ಇದೀಗ ಇದೇ ಇಂಟರ್ನೆಟ್ನಲ್ಲಿ ಕಂಡುಬಂದಿದೆ. ಹಾಗಂತ ಇದು ಹಳೇ ಫೋಟೋ ಏನಲ್ಲ.
ಬಚ್ಚನ್ ಕುಟುಂಬದಲ್ಲಿ ಬಿರುಕು ಮೂಡಿದೆಯಾ? ಐಶ್ವರ್ಯಾ ಹೊರಬಂದಿದ್ದಾರಾ? ಎಂಬ ಪ್ರಶ್ನೆ ಬಹಳ ಸಮಯದ ಹಿಂದೆಯೇ ಎದ್ದಿತ್ತು. ವದಂತಿಗಳಿಗೆ ಪೂರಕವಾಗಿ, ಇದೇ ಸಾಲಿನ ಜುಲೈನಲ್ಲಿ ನಡೆದ ಅಂಬಾನಿ ಕುಟುಂಬದ ಅದ್ದೂರಿ ವಿವಾಹ ಸಮಾರಂಭಕ್ಕೆ ಐಶ್ವರ್ಯಾ ರೈ ಪ್ರತ್ಯೇಕವಾಗಿ ಆಗಮಿಸಿದರು. ಪತಿ ಅಭಿಷೇಕ್ ಅವರು ತಮ್ಮ ತಂದೆ, ಭಾರತೀಯ ಚಿತ್ರರಂಗದ ಹಿರಿಯ ನಟ ಅಮಿತಾಭ್ ಬಚ್ಚನ್ ಸೇರಿ ತಮ್ಮ ಕಂಪ್ಲೀಟ್ ಫ್ಯಾಮಿಲಿ ಜೊತೆ ಅಂಬಾನಿ ವೆಡ್ಡಿಂಗ್ಗೆ ಎಂಟ್ರಿ ಕೊಟ್ರೆ, ಐಶ್ ಕೇವಲ ಮಗಳು ಆರಾಧ್ಯ ಜೊತೆ ಕಾರ್ಯಕ್ರಮಕ್ಕೆ ಪ್ರವೇಶಿಸಿದ್ದರು. ಇದು ದೊಡ್ಡ ಮಟ್ಟದ ವದಂತಿಗಳಿಗೆ ಕಾರಣವಾಗಿತ್ತು. ಈವೆಂಟ್ ನಡೆದ ಸ್ಥಳದಲ್ಲಿ ಐಶ್ ಅಭಿ ಒಟ್ಟಿಗೆ ಕುಳಿತಿರುವ ಫೋಟೋ ವೈರಲ್ ಆದ್ರೂ ಕೂಡಾ, ದಂಪತಿ ಸಮಾರಂಭಕ್ಕೆ ಪ್ರತ್ಯೇಕವಾಗಿ ಆಗಮಿಸಿದ್ದೇ ತಪ್ಪು ಎಂಬಂತೆ ಬಿಂಬಿಸಲಾಗಿತ್ತು.