ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟಿ ಸಮಂತಾ ರುತ್ ಪ್ರಭು ಅವರ ತಂದೆ ಜೋಸೆಫ್ ಪ್ರಭು ನಿಧನರಾಗಿದ್ದಾರೆ. ತಂದೆಯ ಮರಣವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ನೊಂದ ಹೃದಯದಲ್ಲೇ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.
"ನಾವು ಮತ್ತೆ ಭೇಟಿಯಾಗುವವರೆಗೆ ಡ್ಯಾಡ್" (Until we meet again Dad) ಎಂದು ಸಮಂತಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಹಾರ್ಟ್ಬ್ರೇಕ್ ಎಮೋಜಿಯೊಂದಿಗೆ ನಟಿ ಸ್ಟೋರಿ ಶೇರ್ ಮಾಡಿದ್ದಾರೆ. ಸದ್ಯ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಚಿತ್ರರಂಗದ ಸಹೋದ್ಯೋಗಿಗಳು ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ. ನಟಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಸಮಂತಾ ರುತ್ ಪ್ರಭು ಇನ್ಸ್ಟಾಗ್ರಾಮ್ ಸ್ಟೋರಿ (Photo: Samantha Instagram Story) ಜೋಸೆಫ್ ಪ್ರಭು ಅವರ ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಸಮಂತಾ ಚೆನ್ನೈನಲ್ಲಿ 1987ರ ಏಪ್ರಿಲ್ 28ರಂದು ಜೋಸೆಫ್ ಪ್ರಭು ಮತ್ತು ನಿನೆಟ್ ಪ್ರಭು ದಂಪತಿಗೆ ಜನಿಸಿದರು. ಜೋಸೆಫ್ ತೆಲುಗು ಆಂಗ್ಲೋ-ಇಂಡಿಯನ್. ಈ ಕಠಿಣ ಸಂದರ್ಭ ಅಭಿಮಾನಿಗಳು ಮತ್ತು ಹಿತೈಷಿಗಳು ನಟಿಗೆ ಧೈರ್ಯ ತುಂಬುತ್ತಿದ್ದಾರೆ.
ಮೌಲ್ಯಗಳನ್ನು ರೂಪಿಸುವಲ್ಲಿ ತಂದೆಯ ಪಾತ್ರ ದೊಡ್ಡದಿತ್ತು:ನಟಿಯ ಜೀವನದಲ್ಲಿ ಮೌಲ್ಯಗಳನ್ನು ರೂಪಿಸುವಲ್ಲಿ ಅವರ ತಂದೆ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ವೃತ್ತಿಜೀವನದ ಆಸಕ್ತಿ, ಬೇಡಿಕೆಗಳ ಹೊರತಾಗಿಯೂ, ನಟಿ ಆಗಾಗ್ಗೆ ತಮ್ಮ ಮೇಲೆ ತಮ್ಮ ಕುಟುಂಬ ಬೀರಿರುವ ಪ್ರಭಾವ ಮತ್ತು ಬೆಂಬಲದ ಬಗ್ಗೆ ಮಾತನಾಡಿದ್ದಾರೆ. ಅದಾಗ್ಯೂ, ತಂದೆಯೊಂದಿಗಿನ ಸಂಬಂಧ ಸವಾಲುಗಳಿಲ್ಲದೇ ಏನೂ ಇರಲಿಲ್ಲ.
ಇತ್ತೀಚಿನ ಸಂದರ್ಶನವೊಂದರಲ್ಲಿ, ಸಮಂತಾ ತಮ್ಮ ತಂದೆಯ 'ಪ್ರೊಟೆಕ್ಟಿವ್ ಪೇರೆಂಟಿಂಗ್ ಸ್ಟೈಲ್' ಮತ್ತು ನಟಿಯ ಸಾಮರ್ಥ್ಯಗಳನ್ನು ಕುಗ್ಗಿಸುವ ಪ್ರವೃತ್ತಿಯ ಬಗ್ಗೆ ಮಾತನಾಡಿದ್ದರು. ಈ ಅನುಭವಗಳು ತಮ್ಮ 'ಸ್ವಯಂ-ಗ್ರಹಿಕೆ'ಯನ್ನು ರೂಪಿಸಿತು ಎಂಬುದನ್ನು ಒಪ್ಪಿಕೊಂಡರು.
ಇದನ್ನೂ ಓದಿ:ಫ್ಯಾಕ್ಟ್ ಚೆಕ್: ಐಶ್ವರ್ಯಾ ರೈ ಮೊಬೈಲ್ ವಾಲ್ಪೇಪರ್ನಲ್ಲಿರೋದು ಅಮಿತಾಭ್ ಬಚ್ಚನ್ ಅಲ್ಲ; ಹಾಗಾದ್ರೆ ಯಾರು? ವಿಡಿಯೋ ಇಲ್ಲಿದೆ
ನೀನು ಅಷ್ಟು ಸ್ಮಾರ್ಟ್ ಅಲ್ಲ ಅಂತಾ ಹೇಳುತ್ತಿದ್ದರು:ನನ್ನ ತಂದೆ ನನಗೆ ಆಗಾಗ್ಗೆ 'ನೀನು ಅಷ್ಟು ಸ್ಮಾರ್ಟ್ ಅಲ್ಲ' ಎಂದು ಹೇಳುತ್ತಿದ್ದರು. ಇದು ಕೇವಲ ಭಾರತೀಯ ಶಿಕ್ಷಣದ ಮಾನದಂಡ. ನನ್ನ ಆತ್ಮವಿಶ್ವಾಸವನ್ನು ಪುನರ್ನಿರ್ಮಿಸಿಕೊಳ್ಳಲು ವರ್ಷಗಳೇ ಬೇಕಾಯಿತು ಎಂದು ಸಮಂತಾ ಈ ವರ್ಷದ ಆರಂಭದಲ್ಲಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದರು. ಈ ಅಡೆತಡೆಗಳ ಹೊರತಾಗಿಯೂ, ಅವರು ತಮ್ಮ ತಂದೆಯೊಂದಿಗಿನ ಬಾಂಧವ್ಯವನ್ನು ಆನಂದಿಸಿದರು, ಅದು ಕಾಲಾನಂತರದಲ್ಲಿ ವಿಕಸನಗೊಂಡಿತು.
ಇದನ್ನೂ ಓದಿ:ನಾಗ ಚೈತನ್ಯ-ಶೋಭಿತಾ ಧೂಳಿಪಾಲ ಮದುವೆ: ಹಳ್ದಿ ಶಾಸ್ತ್ರದ ಫೋಟೋ, ವಿಡಿಯೋ ನೋಡಿ
2021ರಲ್ಲಿ ನಟ ನಾಗ ಚೈತನ್ಯ ಅವರಿಂದ ಸಮಂತಾ ವಿಚ್ಛೇದನ ಪಡೆದ ನಂತರ ಜೋಸೆಫ್ ಪ್ರಭು ಹೆಚ್ಚು ಸುದ್ದಿಯಾದರು. ಮದುವೆ ಮತ್ತು ಅವರ ಜೀವನದಲ್ಲಿನ ಬದಲಾವಣೆಗಳನ್ನು ಪ್ರತಿಬಿಂಬಿಸುವಂತಹ ಪೋಸ್ಟ್ ಅನ್ನು ಹಂಚಿಕೊಂಡು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದರು. ಸದ್ಯ ಸವಾಲಿನ ಸಂದರ್ಭ ಸಾಂತ್ವನದ ಮಾತುಗಳ ಮೂಲಕ ಅಭಿಮಾನಿಗಳು ಮತ್ತು ಹಿತೈಷಿಗಳು ಸಮಂತಾ ಅವರಿಗೆ ಧೈರ್ಯ ತುಂಬುತ್ತಿದ್ದಾರೆ.