ಕೋವಿಡ್ -19 ಸಾಂಕ್ರಾಮಿಕ ಸಂದರ್ಭ ಸಮಾಜ ಸೇವೆಯಿಂದ ಜನಪ್ರಿಯರಾದ ನಟ ಸೋನು ಸೂದ್ ಅವರ ವಾಟ್ಸಾಪ್ ಖಾತೆ ಸರಿಸುಮಾರು 60 ಗಂಟೆಗಳ ಕಾಲ ಬ್ಲಾಕ್ ಆಗಿ ಸಮಸ್ಯೆ ಎದುರಿಸಿದರು. ಈ ಬಗ್ಗೆ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಹತಾಶೆ ವ್ಯಕ್ತಪಡಿಸಿದರು. ಜೊತೆಗೆ ಈ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದರು. ಅದೃಷ್ಟವಶಾತ್, ನಟನ ಮನವಿಯನ್ನು ಆಲಿಸಿ, ಕೆಲ ಗಂಟೆಗಳ ನಂತರ ಅವರ ವಾಟ್ಸಾಪ್ ಅನ್ನು ಸರಿಪಡಿಸಲಾಯಿತು.
ವಾಟ್ಸಾಪ್ ಸ್ಥಗಿತದ ಸಮಯ ಜನಸಾಮಾನ್ಯರಿಂದ ಸಾವಿರಾರು ಸಂದೇಶಗಳು ಬಂದಿದ್ದವು. ಸಹಾಯ ಕೋರಿ ನಟನಿಗೆ ಹಲವರು ಮೆಸೇಜ್ ಮಾಡಿದ್ದರು. ಕೇವಲ 61 ಗಂಟೆಗಳಲ್ಲಿ 9,000ಕ್ಕೂ ಹೆಚ್ಚು ಸಂದೇಶಗಳು ನಟನ ವಾಟ್ಸಾಪ್ನಲ್ಲಿದ್ದವು. ವಾಟ್ಸಾಪ್ ಪ್ರವೇಶ ಸಾಧ್ಯವಾದ ನಂತರ, "ಫೈನಲಿ ನನ್ನ WhatsApp ಅನ್ನು ಹಿಂಪಡೆಯಲಾಗಿದೆ. 61 ಗಂಟೆಗಳಲ್ಲಿ 9,483 ಅನ್ರೀಡ್ ಮೆಸೇಜ್ಗಳು. ಧನ್ಯವಾದಗಳು" ಎಂದು ಇನ್ಸ್ಟಾ ಸ್ಟೋರಿನಲ್ಲಿ ತಿಳಿಸಿದ್ದಾರೆ.
ಸೋನು ಸೂದ್ ಅವರು ವಾಟ್ಸಾಪ್ನಲ್ಲಿ ಸಮಸ್ಯೆಗಳನ್ನು ಎದುರಿಸಿರುವುದು ಇದೇ ಮೊದಲಲ್ಲ. ಈ ಹಿಂದೆ ಎಕ್ಸ್ (ಟ್ವಿಟರ್)ನಲ್ಲಿ ವಾಟ್ಸಾಪ್ ಕುಂದುಕೊರತೆಗಳನ್ನು ತಿಳಿಸಿ, ಪ್ಲ್ಯಾಟ್ಫಾರ್ಮ್ನ ಸರ್ವಿಸ್ಗಳನ್ನು ಸುಧಾರಿಸಲು ಒತ್ತಾಯಿಸಿದ್ದರು.
ಕೋವಿಡ್ ಸಂದರ್ಭ ಸೋನು ಸೂದ್ ಕಷ್ಟದಲ್ಲಿರುವವರಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದ್ದರು. ಸಾಂಕ್ರಾಮಿಕದ ನಂತರವೂ, ಬಡವರು ಮತ್ತು ಹಿಂದುಳಿದವರಿಗೆ ಸಹಾಯ ಮಾಡುವುದನ್ನು ಮುಂದುವರಿಸಿದ್ದಾರೆ. ಅವರ ಮುಂಬೈ ನಿವಾಸದ ಹೊರಗೆ ಸಾಕಷ್ಟು ಜನರು ಆಗಮಿಸುವ, ಸಹಾಯ ಕೇಳುವ, ಧನ್ಯವಾದ ಅರ್ಪಿಸುವ ದೃಶ್ಯಗಳು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಉದ್ಯೋಗಾವಕಾಶಗಳು, ಹಣಕಾಸಿನ ನೆರವು, ವೈದ್ಯಕೀಯ ಬೆಂಬಲ ಅಥವಾ ಇತರೆ ಯಾವುದೇ ರೀತಿಯ ಸಹಾಯ ಕೋರಿ ಬರುವ ಜನರೊಂದಿಗೆ ನಟ ಸಂವಾದ ನಡೆಸುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತವೆ.