ಮುಂಬೈ (ಮಹಾರಾಷ್ಟ್ರ):ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇಂದು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಶಂಕಿತನನ್ನು ಬಾಂದ್ರಾ ಪೊಲೀಸ್ ಠಾಣೆಗೆ ಕರೆತರಲಾಗಿದೆ ಎಂದು ವರದಿಯಾಗಿತ್ತು. ವಿಡಿಯೋ ಕೂಡಾ ವೈರಲ್ ಆಗಿತ್ತು. ಆದ್ರೆ ಸೈಫ್ ಪ್ರಕರಣದ ತನಿಖೆ ಮುಂದುವರಿದಿದ್ದು, ಈವರೆಗೆ ಯಾರನ್ನೂ ವಶಕ್ಕೆ ಪಡೆದಿಲ್ಲ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
6 ಬಾರಿ ಚಾಕು ಇರಿತ: ಬುಧವಾರ ತಡರಾತ್ರಿ ಮುಂಬೈನಲ್ಲಿರುವ ನಟನ ನಿವಾಸದಲ್ಲಿ ಭೀಕರ ಹಲ್ಲೆ ನಡೆದಿತ್ತು. ಸೈಫ್ಗೆ ಚಾಕುವಿನಿಂದ 6 ಬಾರಿ ಇರಿಯಲಾಗಿತ್ತು. ಸದ್ಯ ನಟನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಬ್ಲೇಡ್ ವಶಪಡಿಸಿಕೊಂಡ ಪೊಲೀಸರು: ಇಂದು ಬೆಳಗ್ಗೆ, ಮುಂಬೈ ಪೊಲೀಸರು ನಟನ ಬೆನ್ನಿನಿಂದ ಹೊರತೆಗೆಯಲಾಗಿರುವ ಬ್ಲೇಡ್‌ನ ಒಂದು ಭಾಗವನ್ನು ವಶಪಡಿಸಿಕೊಂಡಿದ್ದಾರೆ. ಉಳಿದ ಭಾಗವನ್ನು ಪಡೆಯಲಿದ್ದಾರೆ.
ನಟನ ಆರೋಗ್ಯದಲ್ಲಿ ಚೇತರಿಕೆ: ಗುರುವಾರ ಮುಂಜಾನೆ (ಬುಧವಾರ ತಡರಾತ್ರಿ) ಬಾಂದ್ರಾದಲ್ಲಿರುವ ಅಪಾರ್ಟ್ಮೆಂಟ್ನ 11ನೇ ಮಹಡಿಯಲ್ಲಿರುವ ನಟನ ಫ್ಲಾಟ್‌ಗೆ ನುಗ್ಗಿದ ಅಪರಿಚಿತ ದಾಳಿ ಮಾಡಿದ್ದಾನೆ. ಮೊದಲು ಮನೆಕೆಲಸದಾಕೆಯ ಮೇಲೆ ದಾಳಿ ಮಾಡಿದ್ದ. ಈ ವೇಳೆ ಆಗಮಿಸಿದ ನಟನಿಗೆ ಚಾಕುವಿನಿಂದ ಆರು ಬಾರಿ ಇರಿದಿದ್ದ. ತೀವ್ರ ಇರಿತಕ್ಕೊಳಗಾದ ಸೈಫ್ ಅವರನ್ನು ಆ ತಕ್ಷಣ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊದಲು ಸೂಕ್ತ ಚಿಕಿತ್ಸೆ ಒದಗಿಸಿ, ನಂತರ ಶಸ್ತ್ರಚಿಕಿತ್ಸೆ ಮಾಡಲಾಯಿತು. ಸದ್ಯ ನಟನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಇದನ್ನೂ ಓದಿ:ಸೈಫ್ ಅಲಿ ಖಾನ್ ಬೆನ್ನಿನಿಂದ 2.5 ಇಂಚು ಉದ್ದದ ಚಾಕು ಹೊರಕ್ಕೆ; ಐಸಿಯುನಲ್ಲಿ ನಟ, ವೈದ್ಯರು ಹೇಳಿದ್ದಿಷ್ಟು
ಕಳೆದ ದಿನ ಮಾಧ್ಯಮದವರಿಗೆ ನಟನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದ ಡಾ.ಡಾಂಗೆ, "ಬಾಲಿವುಡ್ ನಟನ ಮೇಲೆ ಅಪರಿಚಿತ ವ್ಯಕ್ತಿಯಿಂದ ಹಲ್ಲೆ ಆಗಿದ್ದು, ಬೆಳಗಿನ ಜಾವ 2 ಗಂಟೆ ಹೊತ್ತಿಗೆ ಆಸ್ಪತ್ರೆಗೆ ಕರೆತರಲಾಯಿತು. ಬೆನ್ನೆಲುಬಲ್ಲಿ ಚಾಕು ಸಿಲುಕಿದ ಹಿನ್ನೆಲೆ ಗಂಭೀರ ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿ, ನಟನ ದೇಹದಿಂದ ಚಾಕುವನ್ನು ಹೊರತೆಗೆಯಲು, ಬೆನ್ನುಮೂಳೆಯಿಂದ ಸೋರಿಕೆ ಆಗುತ್ತಿದ್ದ ದ್ರವವನ್ನು ಸರಿಪಡಿಸೋ ಸಲುವಾಗಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಪ್ಲಾಸ್ಟಿಕ್ ಸರ್ಜರಿ ತಂಡ ಚಿಕಿತ್ಸೆಯಲ್ಲಿ ಭಾಗಿ ಆಗಿತ್ತು. ನಟ ಡೇಂಜರ್ನಿಂದ ಹೊರ ಬಂದಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ'' ಎಂದಿದ್ದರು.
ಇದನ್ನೂ ಓದಿ:100 ಹೊಲಿಗೆಗಳಿಂದ ಹಿಡಿದು ಕೆಲ ಶಸ್ತ್ರಚಿಕಿತ್ಸೆಗಳವರೆಗೆ: 5 ಬಾರಿ ಗಾಯಗೊಂಡ ಸೈಫ್ ಅಲಿ ಖಾನ್
ಒಂದು ಕೋಟಿ ರೂಪಾಯಿಗೆ ಬೇಡಿಕೆ:ದಾಖಲಾಗಿರುವ ದೂರಿನಲ್ಲಿ, ಹಲ್ಲೆ ಮಾಡಿದವ ಸೈಫ್ ಕುಟುಂಬದಿಂದ ಒಂದು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಎಂದು ಆರೋಪಿಸಲಾಗಿದೆ. ದೂರಿನ ಪ್ರಕಾರ, ಆ ವ್ಯಕ್ತಿ ಮೊದಲು ಮನೆ ಕೆಲಸದಾಕೆ ಮೇಲೆ ಹೆಕ್ಸಾ ಬ್ಲೇಡ್‌ನಿಂದ ಹಲ್ಲೆ ನಡೆಸಿದ್ದಾನೆ. ಆಕೆ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದಾಗ್ಯೂ, ಕೈಗಳು ಇರಿತಕ್ಕೊಳಗಾಗಿವೆ. ಆ ವೇಳೆ, ದುಷ್ಕರ್ಮಿ ಬಳಿ "ನಿಮಗೇನು ಬೇಕು" ಎಂದು ಮನೆಕೆಲಸದಾಕೆ ಕೇಳಿದ್ದಾಳೆ. ಆತ "ನನಗೆ ಹಣ ಬೇಕು ಎಂದಿದ್ದು, ಎಷ್ಟು ಎಂದು ಮನೆಕೆಲಸದಾಕೆ ಪ್ರಶ್ನಿಸಿದ್ದಾರೆ. ಅದಕ್ಕೆ ಇಂಗ್ಲಿಷ್‌ನಲ್ಲಿ 'ಒಂದು ಕೋಟಿ' ಎಂದು ಉತ್ತರಿಸಿದ್ದಾನೆ ಎಂಬ ವಿಷಯಗಳನ್ನು ದೂರಿನಲ್ಲಿ ತಿಳಿಸಲಾಗಿದೆ.