ಬೆಂಗಳೂರು: 2024-25ನೇ ಸಾಲಿನ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ ಖ್ಯಾತ ನಟ ಕಿಶೋರ್ ಕುಮಾರ್ ಜಿ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಪ್ರತೀ ವರ್ಷ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವವನ್ನು ಆಯೋಜಿಸಲಾಗುತ್ತಿದೆ. ಅದರಂತೆ ಪ್ರಸಕ್ತ 2024-25ನೇ ಸಾಲಿನ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಏರ್ಪಡಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಸಂಘಟನಾ ಮತ್ತು ಕೋರ್ ಸಮಿತಿಗಳನ್ನು ರಚಿಸಲಾಗಿದೆ.
ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆಯಲ್ಲಿನ ನಿರ್ಣಯದನ್ವಯ ಈ ಚಲನಚಿತ್ರೋತ್ಸವವನ್ನು 2025ರ ಮಾರ್ಚ್ 1 ರಿಂದ 8ರ ವರೆಗೆ ಏರ್ಪಡಿಸಲಾಗಿದ್ದು, ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ಮಾರ್ಚ್ 1ರಂದು ಮತ್ತು ಮಾರ್ಚ್ 8ರಂದು ಸಮಾರೋಪ ಸಮಾರಂಭ ನಡೆಯಲಿದೆ. ಈ ಚಿತ್ರೋತ್ಸವದ ಕುರಿತು ಹೆಚ್ಚಿನ ಪ್ರಚಾರಕ್ಕಾಗಿ ಹಿಂದಿ ಮತ್ತು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿರುವ ಕನ್ನಡದ ಖ್ಯಾತ ನಟ ಕಿಶೋರ್ ಕುಮಾರ್ ಜಿ ಅವರನ್ನು ಚಿತ್ರೋತ್ಸವದ ರಾಯಭಾರಿಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.