ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಹಾಗೂ ಕಂಟೆಂಟ್ ಓರಿಯೆಂಟೆಡ್ ಚಿತ್ರಗಳ ನಿರ್ಮಾಣ ಹೆಚ್ಚಾಗುತ್ತಿದೆ. ಈ ಕಾರಣಕ್ಕೆ 'ದಿ ಸೂಟ್' ಚಿತ್ರ ನಟ ಕಮಲ್ ಕನ್ನಡ ಚಿತ್ರರಂಗಕ್ಕೆ ಅನುಕೂಲವಾಗುವಂತಹ "MYTH FX" ಎಂಬ ಸ್ಟುಡಿಯೋವನ್ನು ಶುರು ಮಾಡಿದ್ದಾರೆ. ಬನ್ನೇರುಘಟ್ಟ ರಸ್ತೆಯ ಅರಕೆರೆಯಲ್ಲಿರುವ ಈ ನೂತನ ಸ್ಟುಡಿಯೋವನ್ನು ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಹಾಗೂ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಉದ್ಘಾಟಿಸಿ ಶುಭ ಕೋರಿದರು. ನಂತರ ಗಣ್ಯರು ಹಾಗೂ ಸ್ಟುಡಿಯೋ ಮುಖ್ಯಸ್ಥರು ಮಾತನಾಡಿದರು.
ಮೊದಲು ಮಾತನಾಡಿದ "MYTH FX" ಸ್ಟುಡಿಯೋ ಮುಖ್ಯಸ್ಥ ಕಮಲ್, ನಾನು ವಿಡಿಯೋ ಕಾನ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದೆ. ನಾನು ಕವಿ ಕೂಡಾ ಹೌದು. ನನ್ನ ಎರಡು ಕವನ ಸಂಕಲನಗಳನ್ನು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಹಾಗೂ ಗಾನಕೋಗಿಲೆ ಲತಾ ಮಂಗೇಶ್ಕರ್ ಬಿಡುಗಡೆಗೊಳಿಸಿದ್ದರು. ಆನಂತರ ನಟನಾಗುವ ಆಸೆ ಮೂಡಿತ್ತು. ಇತ್ತೀಚೆಗೆ ತೆರೆಕಂಡ "ದಿ ಸೂಟ್" ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದೇನೆ. ಚಿತ್ರರಂಗಕ್ಕೆ ಅನುಕೂಲವಾಗುವಂತಹ ಏನಾದರೊಂದು ಕೆಲಸ ಮಾಡಬೇಕೆಂದು ನನಗೆ ಅನಿಸುತ್ತಲೇ ಇತ್ತು. ಆ ಸಮಯಕ್ಕೆ ನನಗೆ ಇಪ್ಪತ್ತಕ್ಕೂ ಅಧಿಕ ವರ್ಷಗಳ ಅನುಭವವಿರುವ ಲೋಕೇಶ್ ಹಾಗೂ ಮಾರುತಿ ಎಂಬ ನುರಿತ ತಂತ್ರಜ್ಞರು ಸಿಕ್ಕರು. ನಾವೆಲ್ಲಾ ಸೇರಿ ಈ "MYTH FX" ಸ್ಟುಡಿಯೋವನ್ನು ಆರಂಭ ಮಾಡಿದ್ದೇವೆ. ನಿರ್ಮಾಪಕರಿಗೆ ಅನುಕೂಲವಾಗುವಂತಹ ಸ್ಟುಡಿಯೋ ಮಾಡಿರುವ ಖುಷಿಯಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಭೈರತಿ ರಣಗಲ್ನನ್ನು ಹೃದಯಕ್ಕೆ ತೆಗೆದುಕೊಂಡ್ರಿ, ಮಫ್ತಿ 2 ಬರಲಿದೆ: ಅಭಿಮಾನಿಗಳಿಗೆ ಶಿವಣ್ಣನ ವಿಶೇಷ ಧನ್ಯವಾದ