ಧ್ರುವ ಸರ್ಜಾ ಮಕ್ಕಳ ನಾಮಕರಣ ಶಾಸ್ತ್ರ ದೇಶದೆಲ್ಲೆಡೆ ರಾಮನಾಮದ ಸ್ಮರಣೆ ಮುಗಿಲು ಮುಟ್ಟಿದೆ. ಕನ್ನಡ ಚಿತ್ರರಂಗ ಅಲ್ಲದೇ ಇಡೀ ಭಾರತೀಯ ಚಿತ್ರರಂಗದ ತಾರೆಯರು ಕೂಡ ಶ್ರೀರಾಮನನ್ನು ಸ್ಮರಿಸಿದ್ದಾರೆ. ಹಲವರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ರಾಮಮಂದಿರದ ನೂರಾರು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.
ಸ್ಯಾಂಡಲ್ವುಡ್ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಶುಭದಿನದಂದೇ ತಮ್ಮ ಇಬ್ಬರು ಮುದ್ದಾದ ಮಕ್ಕಳ ನಾಮಕರಣ ಶಾಸ್ತ್ರ ಮಾಡಿದ್ದಾರೆ. ಹನುಮನ ಭಕ್ತನಾಗಿರುವ ಧ್ರುವ ಸರ್ಜಾ ಮಕ್ಕಳಿಗೆ ಏನು ಹೆಸರಿಡ್ತಾರೆ ಎಂದು ತಿಳಿಯಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಇಬ್ಬರು ಮಕ್ಕಳಿಗೂ ಒಂದೇ ದಿನ ನಾಮಕರಣ ಮಾಡುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಪ್ರೀತಿಸಿ ದಾಂಪತ್ಯ ಜೀವನ ಆರಂಭಿಸಿದ್ದ ಧ್ರುವ-ಪ್ರೇರಣಾ ಬಾಳಿಗೆ ಪ್ರೇಮದ ಕಾಣಿಕೆಯಾಗಿ ಮಗಳು ಮಡಿಲು ಸೇರಿ ಒಂದೂವರೆ ವರ್ಷ ಆಗುತ್ತಾ ಬಂದ್ರೂ ಧ್ರುವ ಮಗಳಿಗೆ ನಾಮಕರಣ ಮಾಡಿರಲಿಲ್ಲ. ಇತ್ತೀಚೆಗೆ ಮುದ್ದು ಮಗನೂ ಕೂಡ ಈ ಜನಪ್ರಿಯ ದಂಪತಿ ಬಾಳಿಗೆ ಎಂಟ್ರಿ ಕೊಟ್ಟಿದ್ದು, ಮಕ್ಕಳ ಹೆಸರು ಹೇಗಿರಲಿದೆ ಎಂದು ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸುತ್ತಿದ್ದರು.
ಎರಡು ಮಕ್ಕಳಾದ್ರೂ ಧ್ರುವ ಯಾಕಿನ್ನು ಮಕ್ಕಳಿಗೆ ಹೆಸರಿಟ್ಟಿಲ್ಲ ಅಂತಾ ಹೋದ ಕಡೆಯೆಲ್ಲಾ ಪ್ರಶ್ನೆ ಎದುರಾಗ್ತಿತ್ತು. ಅದ್ರೆ ಭಜರಂಗಿ ಭಕ್ತ ಧ್ರುವ ಮಾತ್ರ ನಕ್ಕು ಸುಮ್ಮನಾಗ್ತಿದ್ರು. ಇದೀಗ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾದ ದಿನವೇ ತಮ್ಮ ಇಬ್ಬರೂ ಮಕ್ಕಳಿಗೆ ಅದ್ಧೂರಿಯಾಗಿ ಹೆಸರಿಡೋ ಶಾಸ್ತ್ರ ಮಾಡಿಸಿ ಖುಷಿ ಪಟ್ಟಿದ್ದಾರೆ.
ಇದನ್ನೂ ಓದಿ:'ರಾಮಲಲ್ಲಾ' ಪ್ರಾಣ ಪ್ರತಿಷ್ಠಾಪನೆ: ದೇಶಾದ್ಯಂತ ಪ್ರಜ್ವಲಿಸಿದ 'ರಾಮಜ್ಯೋತಿ' - ಫೋಟೋಗಳಿಲ್ಲಿವೆ
ಸೋಮವಾರ ಹನುಮ ಭಕ್ತ ಧ್ರುವ ಸರ್ಜಾ ಮಕ್ಕಳಿಗೆ ಹೆಸರಿಟ್ಟಿದ್ದಾರೆ. ಮುದ್ದು ಮಗಳಿಗೆ ರುದ್ರಾಕ್ಷಿ ಡಿ ಸರ್ಜಾ, ಮಗನಿಗೆ ಹಯಗ್ರೀವ ಡಿ ಸರ್ಜಾ ಎಂದು ಹೆಸರಿಟ್ಟಿದ್ದಾರೆ. ಅಭಿಮಾನಿಗಳು ಊಹಿಸಿದಂತೆ ದೈವಿಕ ಭಾವ ಮೂಡಿಸುವ ಹೆಸರನ್ನೇ ಇಟ್ಟಿದ್ದಾರೆ ಆ್ಯಕ್ಷನ್ ಪ್ರಿನ್ಸ್. ಧ್ರುವ-ಪ್ರೇರಣಾ ದಂಪತಿ ಪುತ್ರಿ 2022ರ ಅಕ್ಟೋಬರ್ 2 ರಂದು ಹುಟ್ಟಿದ್ರೆ, 2023ರ ಸೆಪ್ಟೆಂಬರ್ ತಿಂಗಳಲ್ಲಿ ಮಗ ಜನಿಸಿದ. ಸಹೋದರ ಚಿರು ಸರ್ಜಾ ಸಮಾಧಿ ಇರೋ ನೆಲಗುಳಿಯ ಧ್ರುವ ಸರ್ಜಾ ಫಾರ್ಮ್ ಹೌಸ್‌ನಲ್ಲಿ ಮಕ್ಕಳ ನಾಮಕರಣ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬಸ್ಥರು ಭಾಗಿಯಾಗಿದ್ರು. ನಾಮಕರಣ ಶಾಸ್ತ್ರಕ್ಕೆ ಕೆಜಿಎಫ್ ಆಧೀರ ಸಂಜಯ್ ದತ್ ಹಾಗೂ ಕೆಡಿ ಸಾರಥಿ ಪ್ರೇಮ್ ಮಡದಿ ರಕ್ಷಿತಾ ಪ್ರೇಮ್ ಆಗಮಿಸಿ ಧ್ರುವ ಸರ್ಜಾ ಮಕ್ಕಳಿಗೆ ಆಶೀರ್ವಾದ ಮಾಡಿದ್ದಾರೆ.
ಇದನ್ನೂ ಓದಿ:'ಫೈಟರ್'ನ 1 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೇಲ್: 4 ಕೋಟಿ ರೂ ವ್ಯವಹಾರ!