ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಆರೋಪದಡಿ ನಟ ದರ್ಶನ್ ಬಂಧನ ವಿಚಾರವಾಗಿ ಇಂದು ಚಿತ್ರರಂಗದ ಅಂಗಸಂಸ್ಥೆಯಾಗಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯಿತು. ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್ ನೇತೃತ್ವದಲ್ಲಿ ನಡೆದ ಪದಾಧಿಕಾರಿಗಳ ಈ ಸಭೆಯಲ್ಲಿ ಮಾಜಿ ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಕೆ.ವಿ.ಚಂದ್ರಶೇಖರ್, ಚಿನ್ನೇಗೌಡ, ಥಾಮಸ್ ಡಿಸೋಜಾ, ಸಾ.ರಾ.ಗೋವಿಂದ್ ಹಾಗೂ ಫಿಲ್ಮ್ ಚೇಂಬರ್ ಪದಾಧಿಕಾರಿಗಳಾದ ಜಯಸಿಂಹ ಮುಸುರಿ, ಕರಿಸುಬ್ಬು ಭಾಗಿಯಾಗಿ ಚರ್ಚಿಸಿದರು.
ರೇಣುಕಾಸ್ವಾಮಿ ಕುಟುಂಬಕ್ಕೆ ಧನಸಹಾಯ: ಸಭೆ ಬಳಿಕ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್ ಮಾತನಾಡಿ, "ಕಳೆದ ಎರಡು ದಿನಗಳಿಂದ ಮಾಧ್ಯಮಗಳಲ್ಲಿ ಬರ್ತಿರುವ ಸುದ್ದಿಗಳನ್ನು ನೋಡ್ತಿದ್ದೀವಿ. ಈ ಅನ್ಯಾಯವನ್ನು ಖಂಡಿಸಲೇಬೇಕು. ಹೀಗಾಗಿ ಮೊದಲು ನಾವು ಮೃತ ರೇಣುಕಾಸ್ವಾಮಿ ಮನೆಗೆ ಫಿಲ್ಮ್ ಚೇಂಬರ್ ವತಿಯಿಂದ ಹೋಗಿ ಅವರ ಕಷ್ಟ ಸುಖಗಳನ್ನು ವಿಚಾರಿಸಿ, ಕುಟುಂಬಕ್ಕೆ ಸಾಂತ್ವನದ ಜೊತೆಗೆ ಧನಸಹಾಯ ಮಾಡುವ ಉದ್ದೇಶ ಹೊಂದಿದ್ದೇವೆ" ಎಂದರು.
ಪೊಲೀಸರ ವರದಿ ನಂತರ ಬ್ಯಾನ್ ನಿರ್ಧಾರ: "ದರ್ಶನ್ ಒಬ್ಬ ದೊಡ್ಡ ನಟ. ನಾವು ಚಿತ್ರರಂಗದಿಂದ ಬ್ಯಾನ್ ಮಾಡಲು ಬರೋದಿಲ್ಲ. ಸದ್ಯ ಪೊಲೀಸರು ತನಿಖೆ ಮಾಡ್ತಿದ್ದಾರೆ. ಕಾನೂನಿನಡಿ ಪೊಲೀಸರು ವರದಿ ಕೊಟ್ಟ ಮೇಲೆ ನಾವು ಬ್ಯಾನ್ ವಿಚಾರವಾಗಿ ನಿರ್ಧಾರ ಮಾಡ್ತೀವಿ" ಎಂದು ತಿಳಿಸಿದರು.
"ಇದು ಕೊಲೆ ವಿಚಾರ. ತುಂಬಾ ಸೂಕ್ಷ್ಮವಾಗಿದೆ. ಬ್ಯಾನ್ ವಿಚಾರ ಕುರಿತಾಗಿ ಕಲಾವಿದರ ಸಂಘದಲ್ಲಿ ಎಲ್ಲಾ ಕಲಾವಿದರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. 2011ರಲ್ಲಿ ನಾವು ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮೀ ಅವರನ್ನು ಮಾತಾಡಿಸಿ ಸರಿ ಮಾಡಿದ್ವಿ. ಆದರೆ ಈಗ ಹಾಗೆ ಆಗಲ್ಲ. ಇದಕ್ಕೆ ಕಾನೂನಿನ ತೊಡಕಿದೆ" ಎಂದು ಎನ್.ಎಂ.ಸುರೇಶ್ ಪ್ರತಿಕ್ರಿಯಿಸಿದರು.