ಸದ್ಯ ದೇಶಾದ್ಯಂತ ಲೋಕಸಭಾ ಚುನಾವಣೆಗಿಂತಲೂ ಹಾಸನದ ಪೆನ್ಡ್ರೈವ್ ಪ್ರಕರಣವೇ ಹೆಚ್ಚು ಸದ್ದು ಮಾಡುತ್ತಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಪ್ರಕರಣಕ್ಕೆ 'ಆ ದಿನಗಳು' ಸಿನಿಮಾ ಖ್ಯಾತಿಯ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಪ್ರತಿಕ್ರಿಯಿಸಿದ್ದಾರೆ.
ನಟ ಚೇತನ್ ಪೋಸ್ಟ್:ತಪ್ಪು ಸಾಬೀತಾದರೆ ಪ್ರಜ್ವಲ್ ರೇವಣ್ಣ ಅವರಿಗೆ ಶಿಕ್ಷೆ ಆಗಬೇಕೆಂದು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ''ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪಗಳು ಗಂಭೀರವಾದದ್ದು. ತಪ್ಪು ಸಾಬೀತಾದರೆ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅನ್ಯಾಯಕ್ಕೊಳಗಾದ ಮಹಿಳೆಯರು ತಮ್ಮ ಕಷ್ಟಗಳನ್ನು ವಿವರಿಸಲು ಧೈರ್ಯದಿಂದ ಮುಂದೆ ಬರುತ್ತಿರುವುದನ್ನು ನೋಡಿ ಸಂತೋಷವಾಗಿದೆ. ಪೆನ್ ಡ್ರೈವ್ ಸಮಸ್ಯೆಯನ್ನು ಸಾವಿರಾರು ನಿರ್ಭಯಾಗಳಿಗೆ ಹೋಲಿಸಿ, ಅದಕ್ಕೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಹೊಣೆ ಹೊರಬೇಕೆಂದು ಒತ್ತಾಯಿಸುತ್ತಿರುವ ಕಾಂಗ್ರೆಸ್ ಪಕ್ಷದ ಮಹಿಳೆಯರ ನಡೆ ಹಾಸ್ಯಾಸ್ಪದ'' ಎಂದು ತಿಳಿಸಿದ್ದಾರೆ.
ಮತ್ತೊಂದು ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ, ''ಬೃಹತ್ ಲೈಂಗಿಕ ಹಗರಣದಲ್ಲಿ 2,900 ಪೆನ್ ಡ್ರೈವ್ ಚಿತ್ರಗಳು/ವಿಡಿಯೋಗಳನ್ನು ಕಾರ್ಯರೂಪಕ್ಕೆ ತರಲು ಆರೋಪಿ ಪ್ರಜ್ವಲ್ ರೇವಣ್ಣ ನಡೆಸಿದ ಸಂಪೂರ್ಣ ನಿರ್ಭಯತೆಯು ನನ್ನ ಮನಸ್ಸನ್ನು ದಿಗ್ಭ್ರಮೆಗೊಳಿಸಿದೆ. ಪೆನ್ ಡ್ರೈವ್ ಸಾರ್ವಜನಿಕಗೊಳಿಸಿದರೆ ಅವರ ಪಕ್ಷ/ಕುಟುಂಬ ಎದುರಿಸಬೇಕಾದ ಭೀಕರ ಪರಿಣಾಮಗಳ ಬಗ್ಗೆ ಯಾವುದೇ ಭಯವಿರಲಿಲ್ಲವೇ? ಭಾರತೀಯ ಆಳುವ ರಾಜವಂಶಗಳ ದ್ವೇಷಪೂರಿತ ಅಹಂಕಾರ ಆಶ್ಚರ್ಯಕರವಾಗಿದೆ'' ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.