ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಆಧರಿತ ಸಿನಿಮಾಗಳು ಬಂದರೆ ಖಂಡಿತವಾಗಿಯೂ ಸಿನಿಮಾ ಪ್ರೇಮಿಗಳು ಕೈ ಹಿಡಿಯುತ್ತಾರೆ ಎನ್ನಲು ಇತ್ತೀಚೆಗೆ ಬರ್ತಿರುವ ಸಿನಿಮಾಗಳು ನಿದರ್ಶನ. ಈಗ ಇಂತಹದ್ದೇ ಕಂಟೆಂಟ್ನೊಂದಿಗೆ 'ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರದ ಮೂಲಕ ತಂಡವೊಂದು ಎಂಟ್ರಿ ಕೊಟ್ಟಿದೆ. ಈಗಾಗಲೇ ತಣ್ಣಗೆ ಚಿತ್ರೀಕರಣವನ್ನೂ ಮುಗಿಸಿಕೊಂಡು, ಟೀಸರ್ ಬಿಡುಗಡೆ ಮಾಡಿದೆ.
ಸೀಮಿತ ದೃಶ್ಯಗಳಲ್ಲಿಯೇ ಕುತೂಹಲದ ಕೆನೆಗಟ್ಟಿರುವಂತೆ ಭಾಸವಾಗುವ ಈ ಟೀಸರ್ ಪ್ರೇಕ್ಷಕರನ್ನು ಸಲೀಸಾಗಿ ತನ್ನತ್ತ ಸೆಳೆದುಕೊಳ್ಳುವಂತಿದೆ. ಇದು ಕಾಶಿನಾಥ್ ಅವರ ಪುತ್ರ ಅಭಿಮನ್ಯು ಕಾಶಿನಾಥ್ ಅಭಿನಯದ ಚಿತ್ರ. ಬೇರೆಯದ್ದೇ ತೆರನಾದ ವಿಶಿಷ್ಟ ಪಾತ್ರದ ಮೂಲಕ ಅಭಿಮನ್ಯು ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಟೀಸರ್‌ನಲ್ಲಿ ಅವರು ವಿಭಿನ್ನ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಧಾನವಾಗಿ ಇದೊಂದು ಥ್ರಿಲ್ಲರ್ ಕಥನ ಒಳಗೊಂಡಿರುವ ಚಿತ್ರವೆಂಬ ಸಂದೇಶವೊಂದು, ಅತ್ಯಂತ ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ತಲುಪಿದೆ. ಟೀಸರ್ ಜೊತೆ ಜೊತೆಗೇ ಒಂದಷ್ಟು ಸೂಕ್ಷ್ಮ ಸಂಗತಿಗಳನ್ನೂ ಚಿತ್ರತಂಡ ಹಂಚಿಕೊಂಡಿತು.
ಇದು ಕಿರಣ್ ಎಸ್.ಸೂರ್ಯ ನಿರ್ದೇಶನದ ಚೊಚ್ಚಲ ಚಿತ್ರ. ಈಗಾಗಲೇ 12 ವರ್ಷಗಳ ಕಾಲ ಚಿತ್ರರಂಗದ ನಾನಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿರುವವರು ಕಿರಣ್. ಇದರೊಂದಿಗೆ ಅವರು ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇದೊಂದು ಲವ್ ಕಂ ಥ್ರಿಲ್ಲರ್ ಜಾನರಿನ ಚಿತ್ರ. ಹಾಗೆಂದ ಮಾತ್ರಕ್ಕೆ ಆ ಪರಿಧಿಗೆ ಸೀಮಿತವಾದ ಕಥೆ ಇದೆಂದು ಅಂದುಕೊಳ್ಳುವಂತಿಲ್ಲ. ಕೊಲೆಯೊಂದರ ಸುತ್ತ ಕಥೆ ಜರುಗುತ್ತದೆ ಅಂದುಕೊಳ್ಳಲೂ ಸಾಧ್ಯವಿಲ್ಲ. ಇದುವರೆಗೆ ನೋಡಿದ್ದು ನಿಜವೋ ಸುಳ್ಳೋ ಎಂಬಂತೆ ಬೆರಗಿಗೆ ದೂಡುವ ರೀತಿಯಲ್ಲಿ ಈ ಸಿನಿಮಾವನ್ನು ರೂಪಿಸಲಾಗಿದೆಯಂತೆ. ವಿಶೇಷವೆಂದರೆ, ಕಿಚ್ಚ ಸುದೀಪ್ ಈ ಚಿತ್ರದ ಹಾಡೊಂದನ್ನು ಹಾಡಿದ್ದಾರೆ. ವಾಸುಕಿ ವೈಭವ್ ಹಾಗೂ ಸಪ್ತಸಾಗರದಾಚೆ ಎಲ್ಲೋ ಖ್ಯಾತಿಯ ಶ್ರೀಲಕ್ಷ್ಮಿ ಒಂದೊಂದು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಎರಡು ಹಾಡುಗಳಿಗೆ ಖುದ್ದು ನಿರ್ದೇಶಕ ಕಿರಣ್ ಎಸ್.ಸೂರ್ಯ ಸಾಹಿತ್ಯ ಬರೆದಿದ್ದಾರೆ.