2024ನೇ ವರ್ಷದಲ್ಲಿ ಒಂದು ತಿಂಗಳು ಮುಗಿದು ಹೋಗಿದೆ. ಆದರೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಯಾವುದೇ ಚಿತ್ರಗಳು ಸಿನಿಮಾ ಪ್ರೇಕ್ಷಕರನ್ನು ತಲುಪುತ್ತಿಲ್ಲ. ಒಂದು ಕಾಲದಲ್ಲಿ ಶುಕ್ರವಾರ ಬಂತಂದ್ರೆ ಸಾಕು ಗಾಂಧಿನಗರದಲ್ಲಿ ಒಂದು ರೀತಿಯ ಹಬ್ಬದ ಸಂಭ್ರಮ ಮನೆ ಮಾಡುತ್ತಿತ್ತು. ಆದರೆ ಕಳೆದ ಎರಡು ಮೂರು ವರ್ಷಗಳಲ್ಲಿ ಸಿನಿಮಾ ಪ್ರೇಮಿಗಳಲ್ಲಿ ಆ ಸಂಭ್ರಮ ಕಡಿಮೆಯಾಗಿದೆ. ಇದಕ್ಕೆ ಕಾರಣ ಒಂದೇ ದಿನ 5ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಆಗುತ್ತಿರುವುದು.
ಸ್ಯಾಂಡಲ್‌ವುಡ್ ಸಿನಿಮಾ ಸಕ್ಸಸ್ಗಿಂತ ಅತೀ ಹೆಚ್ಚು ಸಿನಿಮಾಗಳ ರಿಲೀಸ್ ವಿಚಾರಕ್ಕೆ ಸುದ್ದಿಯಾಗುತ್ತಿದೆ. ಫೆಬ್ರವರಿಯ ಮೊದಲೆರಡು ವಾರಗಳಲ್ಲಿ ಒಟ್ಟು 11 ಚಿತ್ರಗಳು ಬಿಡುಗಡೆಯಾಗಿದ್ದವು. ಈಗ ಇದೇ ಟ್ರೆಂಡ್ ಮುಂದುವರೆದಿದೆ. ಈ ವಾರವೂ ಕೂಡ ಎಂಟು ಚಿತ್ರಗಳು ಬಿಡುಗಡೆಯಾಗುತ್ತಿವೆ.
ಕಳೆದ ವಾರ ಏಳು ಚಿತ್ರಗಳು ಬಿಡುಗಡೆಯಾಗುವುದಾಗಿ ಘೋಷಣೆಯಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ರಾಗಿಣಿ ಅಭಿನಯದ ಇಮೇಲ್ ಚಿತ್ರವನ್ನು ಮುಂದೂಡಲಾಯಿತು. ಕೊನೆಗೆ ಆರು ಚಿತ್ರಗಳು ಬಿಡುಗಡೆಯಾದವು. ಈ ಪೈಕಿ ವಿನಯ್ ರಾಜ್ ಕುಮಾರ್ ಅಭಿನಯದ 'ಒಂದು ಸರಳ ಪ್ರೇಮ ಕಥೆ' ಚಿತ್ರ ಸಿನಿಮಾ ಪ್ರೇಕ್ಷಕರನ್ನು ರಂಜಿಸುವ ಮೂಲಕ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ ಉಳಿದ ಚಿತ್ರಗಳು ಏನಾದವು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಹೀಗಿರುವಾಗಲೇ, ಈ ವಾರ ಎಂಟು ಚಿತ್ರಗಳು ಬಿಡುಗಡೆಯಾಗಲಿವೆ.
ಈ ಸಾಲಿನಲ್ಲಿ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿರೋ ಶಾಖಾಹಾರಿ, ದೀಕ್ಷಿತ್ ಶೆಟ್ಟಿ ಅಭಿನಯದ ಕೆಟಿಎಂ, ಗೀತಾ ಭಾರತಿ ಭಟ್ ಅಭಿನಯದ ರವಿಕೆ ಪ್ರಸಂಗ, ಕೆ.ಎಂ.ಚೈತನ್ಯ ನಿರ್ದೇಶನದ ಅಬ್ಬಬ್ಬ, ಎಸ್.ನಾರಾಯಣ್ ನಿರ್ದೇಶನದ 50ನೇ ಚಿತ್ರ 5ಡಿ, ಶ್ರುತಿ ಹರಿಹರನ್ ಅಭಿನಯದ ಸಾರಾಂಶ, ಅಭಯ್ ಚಂದ್ರು ಅಭಿನಯದ ಮಂಡ್ಯ ಹೈದ, ಹೊಸಬರ ಧೀರ ಸಾಮ್ರಾಟ್ ಚಿತ್ರಗಳು ಬಿಡುಗಡೆಯಾಗಲಿವೆ.