ನವದೆಹಲಿ: ಭಾರತದಲ್ಲಿ ಫ್ರಿಲಾನ್ಸಿಂಗ್ ಆಯ್ಕೆ ಮಾಡಿಕೊಳ್ಳುತ್ತಿರುವ ಮಹಿಳೆಯರ ಸಂಖ್ಯೆ ಕೆಲವು ವರ್ಷಗಳಿಂದ ದುಪ್ಪಟ್ಟುಗೊಂಡಿದೆ. 2023ರಲ್ಲಿ ಶೇ.4ರಷ್ಟಿದ್ದ ಈ ಪ್ರಮಾಣ 2024ರಲ್ಲಿ ಶೇ.8ರಷ್ಟಾಗಿದೆ ಎಂದು ಹೊಸ ವರದಿ ತಿಳಿಸಿದೆ.
ಈ ಕುರಿತು ತಿಳಿಸಿರುವ ಪ್ರತಿಭೆಗಳ ನಿರ್ವಹಣಾ ಫ್ಲಾಟ್ಫಾರಂ ಫಂಡ್ಇಟ್, ಈ ಬೆಳವಣಿಗೆಗೆ ಕಾರಣ ಗಿಗ್ ಆರ್ಥಿಕತೆ ಅಥವಾ ಫ್ರಿಲ್ಯಾನ್ಸಿಂಗ್ ಉದ್ಯಮದಲ್ಲಿ ಭಾಗಿದಾರರಿಗೆ ನೀಡುತ್ತಿರುವ ಅನುಕೂಲವಾಗಿದೆ. ಫ್ರಿಲಾನ್ಸಿಂಗ್ ಮಹಿಳೆಯರಿಗೆ ಅನೇಕ ಪ್ರಯೋಜನ ಮತ್ತು ಸ್ವಾತಂತ್ರ್ಯವನ್ನು ನೀಡಿದೆ. ಇದರಿಂದ ಮಹಿಳೆಯರು ತಮ್ಮ ಜೀವನದ ಯಾವುದೇ ಹಂತದಲ್ಲಿ ತಮ್ಮ ಆಸಕ್ತಿಗೆ ಅನುಗುಣವಾದ ವೃತ್ತಿಯಲ್ಲಿ ಅರೆಕಾಲಿಕ ಉದ್ಯೋಗಿಯಾಗಿ ಮುಂದುವರೆಯಬಹುದಾಗಿದೆ. ಇದರಿಂದ ಆರ್ಥಿಕವಾಗಿಯೂ ಸಬಲರಾಗಬಹುದು. ಅಷ್ಟೇ ಅಲ್ಲದೇ, ಕಳೆದ ವರ್ಷದ ಫೆಬ್ರವರಿಗೆ ಹೋಲಿಕೆ ಮಾಡಿದಾಗ ಈ ವರ್ಷದ ಫೆಬ್ರವರಿಯಲ್ಲಿ ಉದ್ಯೋಗದಲ್ಲಿ ಮಹಿಳಾ ಅಭ್ಯರ್ಥಿಗಳು ಶೇ 56ರಷ್ಟು ಹೆಚ್ಚಳಗೊಂಡಿದ್ದಾರೆ.
ಸಂಸ್ಥೆಯ ಯಶಸ್ಸಿನಲ್ಲಿ ಮಹಿಳಾ ಉದ್ಯೋಗಿಗಳು ಪ್ರಮುಖ ಪಾತ್ರವನ್ನು ನಿರ್ವಹಣೆ ಮಾಡುತ್ತಾರೆ. ಅವರು ಕಠಿಣ ಶ್ರಮಜೀವಿಗಳು ಮತ್ತು ಕ್ರಿಯಾತ್ಮಕತೆ ಹೊಂದಿರುವವರು ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಫಂಡ್ಇಟ್ನ ಶೇಖರ್ ಗರಿಸ ತಿಳಿಸಿದ್ದಾರೆ.
ಮಹಿಳಾ ನಾಯಕರು ರೂಪಾಂತರದ ನಾಯಕತ್ವದ ಗುಣಗಳನ್ನು ಪ್ರದರ್ಶಿಸುತ್ತಾರೆ. ತಂಡದಲ್ಲಿ ಹೆಚ್ಚಿನ ಮಹಿಳೆಯರನ್ನು ಹೊಂದುವುದರಿಂದ ಕೆಲಸದ ಸ್ಥಳದಲ್ಲಿ ವೈವಿಧ್ಯತೆ ಮತ್ತು ಸೇರ್ಪಡೆಯನ್ನು ಉತ್ತೇಜಿಸುತ್ತದೆ ಎಂದಿದ್ದಾರೆ.