ಹೈದರಾಬಾದ್: ಪ್ರತಿಯೊಬ್ಬರಿಗೂ ಇರುವುದು 24 ಗಂಟೆ. ಈ ಸಮಯವನ್ನು ಕೆಲಸಗಳಿಗೆ ಹೇಗೆ ಬಳಕೆ ಹಾಗೂ ನಿರ್ವಹಣೆ ಮಾಡುತ್ತೇವೆ ಎಂಬುದರ ಮೇಲೆ ನಿಮ್ಮ ಟೈಂ ಮ್ಯಾನೇಜ್ಮೆಂಟ್ ನಿಂತಿದೆ. ಇದರ ಸರಿಯಾದ ನಿರ್ವಹಣೆ ಮಾಡದ ಹಿನ್ನೆಲೆ ಅನೇಕ ವಿದ್ಯಾರ್ಥಿಗಳು, ಉದ್ಯೋಗಿಗಳು ಯಶಸ್ಸಿನಲ್ಲಿ ಎಡವುತ್ತಾರೆ. ಅಯ್ಯೋ ನಮಗೆ ಸಮಯವೇ ಸಾಕಾಗುತ್ತಿಲ್ಲ ಎಂಬ ಮಾತುಗಳನ್ನು ಹೇಳುವ ಬದಲು ಹೇಗೆ ಈ ಸಮಯ ನಿರ್ವಹಣೆ ಮಾಡಬೇಕು ಎಂದು ವಿದ್ಯಾರ್ಥಿಗಳು ಅರಿಯುವುದು ಅವಶ್ಯವಾಗಿದೆ. ಇದರಿಂದ ಪರೀಕ್ಷೆ ಸೇರಿದಂತೆ ಮುಂದಿನ ತಯಾರಿಗೆ ಸಿದ್ಧತೆ ನಡೆಸಿ, ಯಶಸ್ವಿಯಾಗಬಹುದು. ಹಾಗಾದರೆ ಇದಕ್ಕೇನು ಮಾಡಬೇಕು ಎನ್ನುತ್ತಿದ್ದರೆ ಇಲ್ಲಿವೆ ಕೆಲವು ಪ್ರಮುಖ ಅಂಶಗಳು.
ಸರಿಯಾಗಿ ಯೋಜಿಸಿ: ಇಂದಿನ ಡಿಜಿಟಲ್ ಜಗತ್ತಿನಲ್ಲಿ ಯೋಜನೆಯಿಲ್ಲದೇ ಮುಂದೆ ಸಾಗುವುದು ಕಷ್ಟ. ಈ ಹಿನ್ನೆಲೆಯಲ್ಲಿ ಅಧ್ಯಯನದ ವಿಷಯಗಳ ಬಗ್ಗೆ ಸ್ಪಷ್ಟವಾದ ಚಿತ್ರಣ ಅಗತ್ಯ. ಯಾವಾಗ ಅಧ್ಯಯನ ಮಾಡಬೇಕು. ಹೇಗೆ, ಎಷ್ಟು ಹೊತ್ತು, ಯಾವುದನ್ನು ಅಧ್ಯಯನ ಮಾಡಬೇಕು ಎಂಬುದರ ಬಗ್ಗೆ ಯೋಜನೆ ರೂಪಿಸಬೇಕು. ಅದರ ಅನುಸರಣೆಗೆ ಮುಂದಾಗಬೇಕು. ಅಷ್ಟೇ ಅಲ್ಲದೆ, ಎಂತಹ ಪರಿಸ್ಥಿತಿಗಳಲ್ಲೂ ಈ ಯೋಜನೆಗಳನ್ನು ನಾಳೆಗೆ ಮುಂದೂಡಬಾರದು. ಕಾರಣ ನಾಳೆಗೆ ಏನು ಓದಬೇಕು ಎಂಬುದರ ಯೋಜನೆ ಕೂಡ ನಿಗದಿ ಮಾಡಿಕೊಂಡಿರಬೇಕು. ಇಂದಿನ ಯೋಜನೆ ತಪ್ಪಿಸುವ ಮೂಲಕ ನಾಳೆಯ ಯೋಜನೆಯನ್ನು ಹಾಳು ಮಾಡಬಾರದು ಎಂಬುದನ್ನು ಅರಿಯಬೇಕು. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ಅಗತ್ಯವಾಗಿ ಕಲಿಯಬೇಕಿರುವ ಅಂಶವನ್ನು ಪೂರ್ಣಗೊಳಿಸಬೇಕು. ಈ ರೀತಿ ನಿರ್ವಹಣೆಯಿಂದ ಸಮಯದ ಕೊರತೆ, ವ್ಯರ್ಥದ ಪ್ರಶ್ನೆ ಉದ್ಬವಿಸುವುದಿಲ್ಲ.
ಪ್ರತಿ ನಿಮಿಷವೂ ಅಮೂಲ್ಯ: ಸಮಯ ಎಂಬುದು ಬಹಳ ಅಮೂಲ್ಯವಾಗಿದ್ದು, ಅನಗತ್ಯವಾಗಿ ವ್ಯಯ ಮಾಡಿದರೆ ನಮಗೆ ನಷ್ಟ. ಗೊತ್ತಿದ್ದೊ ಅಥವಾ ಗೊತ್ತಿಲ್ಲದೆಯೋ ಸಮಯ ವ್ಯರ್ಥ ಮಾಡಿದರೆ, ಅದನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂಬುದು ಮರೆಯಬಾರದು. ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳ ಸಮಯದಲ್ಲಿ ಪ್ರತಿ ನಿಮಿಷವೂ ಗುರಿ ಸಾಧನೆಗೆ ಸಿಕ್ಕ ಅಮೂಲ್ಯ ಕ್ಷಣ. ಇದನ್ನು ಅರ್ಥೈಸಿಕೊಂಡು ಮೊದಲ ಹೆಜ್ಜೆ ಇಡಬೇಕು. ಸಣ್ಣ ಕೆಲಸಕ್ಕೆ ಸಮಯ ವ್ಯರ್ಥವಾಗುತ್ತಿದೆ ಎಂದರೆ, ಕುಟುಂಬದ ಸಹಾಯ ಪಡೆಯಿರಿ.
ಏಕಾಗ್ರತೆ ಕಳೆದುಕೊಳ್ಳಬೇಡಿ: ಒಂದು ಸಣ್ಣ ಪಾಠವನ್ನು ಓದಲು ವಿದ್ಯಾರ್ಥಿಗಳು ಗಂಟೆಗಳ ಕಾಲ ಸಮಯ ವ್ಯರ್ಥ ಮಾಡುತ್ತಾರೆ. ಕಾರಣ, ಒಂದು ಕಡೆ ಓದುತ್ತಾ, ಮತ್ತೊಂದು ಕಡೆ ಹರಟೆ ಹೊಡೆಯುತ್ತಿರುತ್ತಾರೆ. ಮೊಬೈಲ್, ಕಂಪ್ಯೂಟರ್, ಟ್ಯಾಬ್ಗಳು ಅವರ ಏಕಾಗ್ರತೆಗೆ ಭಂಗ ಉಂಟು ಮಾಡುತ್ತದೆ. ಇದು ಓದುವ ಹುಮ್ಮಸ್ಸನ್ನು ಹತ್ತಿಕ್ಕುತ್ತದೆ. ಈ ಹಿನ್ನಲೆಯಲ್ಲಿ ಓದುವಾಗ ಗಮನ ಓದಿನತ್ತ ಇರಲಿ.